ಕೋಝಿಕ್ಕೋಡ್ (ಕೇರಳ): ಕೋಝಿಕ್ಕೋಡ್ ಸಮೀಪದ ಪೂಕ್ಕಾಡ್ ನಿವಾಸಿ 82 ವರ್ಷದ ವಣ್ಣಂಗುನಿ ಅಬೂಬಕ್ಕರ್ ಅವರು ವೈದ್ಯರಲ್ಲ. ಇವರು ಆರೋಗ್ಯ ವಿಜ್ಞಾನವನ್ನೂ ಅಧ್ಯಯನ ಮಾಡಿದವರಲ್ಲ. ಒಬ್ಬ ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ಪಕ್ಕಾ ಹಳ್ಳಿಯವರು. ಆದರೆ ಇವರಿಗೆ ಹಸಿರು ಎಲೆಗಳ, ಸೊಪ್ಪು ತರಕಾರಿಯ ಮಹತ್ವ ಗೊತ್ತು. ಎಲೆಗಳ ಔಷಧೀಯ ಗುಣಗಳ ಬಗ್ಗೆ ಅಗಾಧ ಜ್ಞಾನ ಇವರಲ್ಲಿದೆ. ಒಬ್ಬ ಹಸಿರು ತರಕಾರಿಗಳ ಪ್ರಚಾರಕ ಎಂದರೆ ತಪ್ಪಾಗಲಾರದು.
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೊಪ್ಪು ತರಕಾರಿ ಉತ್ತಮ ಪರಿಹಾರ. ಕುರುಡುತನ, ಸ್ಥೂಲಕಾಯತೆ, ರಕ್ತಹೀನತೆ, ರಕ್ತದೊತ್ತಡ, ಹೃದಯ ಸಮಸ್ಯೆಗಳು ಹಾಗೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ವೈದ್ಯರು ಸಾಮಾನ್ಯವಾಗಿ ಸೊಪ್ಪು ತರಕಾರಿಗಳನ್ನು ಆಹಾರದಲ್ಲಿ ಸೇರಿಸಲು ಸಲಹೆ ನೀಡುತ್ತಾರೆ. ಇಂತಹ ಆರೋಗ್ಯದ ಗುಟ್ಟು ನಮ್ಮ ಸುತ್ತಮುತ್ತಲಿನ ಸೊಪ್ಪುಗಳಲ್ಲೇ ಅಡಗಿರುತ್ತದೆ. ಆದರೆ ನಮ್ಮ ಸುತ್ತಮುತ್ತಲಿರುವ ಹಲವಾರು ಔಷಧೀಯ ಪ್ರಾಮುಖ್ಯತೆ ಹೊಂದಿರುವ ವಿವಿಧ ಸೊಪ್ಪುಗಳ ಬಗ್ಗೆ ನಿಮಗೆ ತಿಳಿದಿದೆಯೇ? ಖಂಡಿತವಾಗಿಯೂ ಇಲ್ಲ ಎನ್ನುತ್ತೀರಿ!
ಆದರೆ 82 ವರ್ಷದ ಅಬೂಬಕ್ಕರ್ ಅವರು ನಮ್ಮ ಸುತ್ತ ಔಷಧೀಯ ಮೌಲ್ಯಗಳಿರುವ ಸೊಪ್ಪುಗಳು, ನಮಗೆ ಶಕ್ತಿ ನೀಡುವ ಎಲೆಗಳ ವಿಧಗಳ ಬಗ್ಗೆ ಮಾಹಿತಿ ನೀಡುತ್ತಾರೆ. "ಸಾಂಬಾರು ಅಥವಾ ಸೈಡ್ ಡಿಶ್ ಅಥವಾ ಪಲ್ಯ ಮಾಡಲು ನಮ್ಮ ಸುತ್ತ ಹಲವಾರು ಬಗೆಯ ಎಲೆಗಳಿವೆ. ವಿವಿಧ ಬಗೆಯ ಹರಿವೆ ಸೊಪ್ಪು, ಬಸಳೆ ಸೊಪ್ಪು, ವಿಟಮಿನ್ ಎಲೆ, ತಗತೆ ಸೊಪ್ಪು ಸೇರಿದಂತೆ ಪಾಲಕ್ ಪ್ರಬೇಧಗಳು ನಮ್ಮಲ್ಲಿವೆ. ಸೊಪ್ಪು ತರಕಾರಿಗಳು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಕ್ಯಾಲ್ಸಿಯಂ, ಬೀಟಾ ಕ್ಯಾರೋಟಿನ್ ಮತ್ತು ಪೈಬರ್ ಅಂಶಗಳನ್ನು ಹೊಂದಿರುತ್ತವೆ. ಅವುಗಳು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಸೊಪ್ಪುಗಳಲ್ಲಿನ ಉತ್ಕರ್ಷಣ ನಿರೋಧಕ ಅಂಶ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಮತ್ತು ಮೂಳೆಯ ಬೆಳವಣಿಗೆಯನ್ನು ಸುಧಾರಿಸುತ್ತವೆ" ಎನ್ನುತ್ತಾರೆ ಅಬೂಬಕ್ಕರ್.
ಇವರ ಮನೆಯಲ್ಲಿದೆ 50ಕ್ಕೂ ಹೆಚ್ಚು ತಳಿಯ ಸೊಪ್ಪುಗಳು: ಈ ಎಲ್ಲಾ ಮಾಹಿತಿ ನೀಡುವ ಹಿರಿಯ ಅಬೂಬಕ್ಕರ್ ಅವರು ತಮ್ಮ ಹೊಲದಲ್ಲಿ ಹಾಗೂ ತಮ್ಮ ಕೃಷಿ ಭೂಮಿಯಲ್ಲಿ 50ಕ್ಕೂ ಹೆಚ್ಚು ಸೊಪ್ಪು ತರಕಾರಿಗಳನ್ನು ಬೆಳೆಸಿ ಸಂರಕ್ಷಿಸುತ್ತಿದ್ದಾರೆ. ಈ ಎಲೆಗಳ ಹೆಸರು ಮತ್ತು ಔಷಧೀಯ ಗುಣಲಕ್ಷಣಗಳನ್ನು ಹೇಳುವ ಅಬೂಕರ್, "ಪ್ರಕೃತಿ ನಮಗೆ ಎಲ್ಲವನ್ನೂ ಆಶೀರ್ವದಿಸಿದೆ. ನಾವು ಅದನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕು" ಎಂದು ಸಲಹೆ ನೀಡಿದ್ದಾರೆ.
ಆಹಾರವನ್ನು ಔಷಧವಾಗಿ ಪರಿವರ್ತಿಸುವುದು ಹೇಗೆ ಎಂಬ ಚಿಂತನೆಯಲ್ಲೇ ಬೆಳೆದ ವಣ್ಣಂಗುಣಿ ಅಬೂಬಕ್ಕರ್, ಚಿಕ್ಕಿಂದಿನಿಂದಲೇ ಸೊಪ್ಪುಗಳ ಮಹತ್ವದ ಬಗ್ಗೆ ತಿಳಿಯುತ್ತಾ ಬಂದರು. ಸೊಪ್ಪು ತರಕಾರಿಗಳು ನಮಗೆ ಹೇರಳವಾದ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ವಿಟಮಿನ್ಗಳು, ಖನಿಜಗಳು ಹಾಗೂ ನಾರಿನಂಶವನ್ನು ಒದಗಿಸುತ್ತವೆ ಹಾಗೂ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎನ್ನುವ ಮಾತನ್ನು ಇವರು ಪದೇ ಪದೇ ಹೇಳುತ್ತಾರೆ.
ಸೊಪ್ಪು ತರಕಾರಿಗಳ ಪ್ರವರ್ತಕರಾಗಿ ಪ್ರಸಿದ್ಧರಾಗಿರುವ ಅಬೂಬಕ್ಕರ್ ಅವರು ಕೊಝಿಕ್ಕೋಡ್ ಜಿಲ್ಲೆಯ ಬಹುತೇಕ ಎಲ್ಲಾ ಕೃಷಿ ಮೇಳಗಳಲ್ಲಿ ಭಾಗವಹಿಸುತ್ತಾರೆ. ಸಾವಿರಾರು ಜನರಿಗೆ ಎಲೆಗಳ ತಳಿಗಳ ಹಾಗೂ ಅವುಗಳ ಔಷಧೀಯ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಾರೆ.
ಮುಂದುವರೆಸಿಕೊಂಡು ಹೋಗುತ್ತಿರುವ ಮಗಳು- ಅಳಿಯ: ಅವರ ಸೊಪ್ಪು ತರಕಾರಿಗಳ ಬಗೆಗಿನ ಜ್ಞಾನ ಹಾಗೂ ಈ ಸಂಪ್ರದಾಯವನ್ನು ಅವರ ನಂತರದ ಪೀಳಿಗೆಯವರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರಿಂದ ಪ್ರಭಾವಿತರಾಗಿರುವ ಅಬೂಬಕ್ಕರ್ ಅವರ ಮಗಳು ರಜಿಯಾ ಹಾಗೂ ಅವರ ಪತಿ ಲತೀಫ್ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಮಿಯಾವಾಕಿ ಅವರ ಅರಣ್ಯೀಕರಣದ ಭಾಗವಾಗಿ ಪತಿ ಪತ್ನಿ ಸೇರಿ 100ಕ್ಕೂ ಹೆಚ್ಚು ಹಣ್ಣುಗಳು ಸೇರಿದಂತೆ ಹಲವು ರೀತಿಯ ಗಿಡಗಳನ್ನು ನೆಟ್ಟಿದ್ದಾರೆ. ಸೊಪ್ಪು ತರಕಾರಿಗಳಿಂದ ಉದಯಿಸಿದ ಈ ಪ್ರಯತ್ನ ಈಗ ಹಸಿರು ಗ್ರಾಮವಾಗಿ ಬೆಳೆಯುತ್ತಿದೆ.
ಇದನ್ನೂ ಓದಿ: ಸಸ್ಯ ಕಾಶಿ ಲಾಲ್ಬಾಗ್ನ ಬ್ಯಾಂಡ್ ಸ್ಟ್ಯಾಂಡ್ ಬಳಿ ಕೀಟ ಕೆಫೆ ಸ್ಥಾಪನೆ.. ಸರ್ವ ರೀತಿಯಲ್ಲೂ ಕೀಟಗಳಿಗೆ ಪೂರಕ