ನವದೆಹಲಿ: ಕೇಂದ್ರ ಸರ್ಕಾರದ ಕೈಗಾರಿಕಾ ನೌಕರರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಕಾರ್ಮಿಕ ಸಚಿವಾಲಯ, ತುಟ್ಟಿಭತ್ಯೆ (ಡಿಎ) ಹೆಚ್ಚಿಸಿರುವುದಾಗಿ ತಿಳಿಸಿದೆ.
ಕೇಂದ್ರ ಕೈಗಾರಿಕಾ ನೌಕರರಿಗೆ ಮಾಸಿಕವಾಗಿ ನೀಡಲಾಗುತ್ತಿದ್ದ 105 ರೂ. ತುಟ್ಟಿಭತ್ಯೆಯನ್ನು 210 ರೂ.ಗೆ ಹೆಚ್ಚಿಸಲಾಗಿದ್ದು, ದೇಶಾದ್ಯಂತ 1.50 ಕೋಟಿ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.
ಈ ಹೆಚ್ಚಳವು ಏಪ್ರಿಲ್ 1ರಿಂದ ಪೂರ್ವಾನ್ವಯವಾಗಿ ಜಾರಿಯಾಗಲಿದ್ದು, ಇದು ನೌಕರರ ಕನಿಷ್ಠ ವೇತನದ ದರ ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಯಾರಿಗೆ ಅನ್ವಯ?
ಕೇಂದ್ರ ಸರ್ಕಾರದ ರೈಲ್ವೆ ಆಡಳಿತ, ಗಣಿಗಳು, ತೈಲ ವಲಯ, ಪ್ರಮುಖ ಬಂದರುಗಳು ಅಥವಾ ಕೇಂದ್ರ ಸರ್ಕಾರ ಸ್ಥಾಪಿಸಿದ ಯಾವುದೇ ನಿಗಮದ ಅಧಿಕಾರದಲ್ಲಿರುವ ಸಂಸ್ಥೆಗಳ ಕಾರ್ಮಿಕರು ಡಿಎ ಹೆಚ್ಚಳದ ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೇ ಇದು ಗುತ್ತಿಗೆ ಕಾರ್ಮಿಕರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಕೇಂದ್ರದ ಮುಖ್ಯ ಕಾರ್ಮಿಕ ಆಯುಕ್ತ ಡಿಪಿಎಸ್ ನೇಗಿ ಮಾಹಿತಿ ನೀಡಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ದೇಶಕ್ಕೆ ಸಂಕಷ್ಟ ಎದುರಾಗಿರುವ ಈ ಸಮಯದಲ್ಲಿ ವಿವಿಧ ವರ್ಗದ ಕಾರ್ಮಿಕರಿಗೆ ಇದು ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.