ನವದೆಹಲಿ: ಕೇಂದ್ರ ಸರ್ಕಾರವು ನೂತನ ಲಸಿಕಾ ನೀತಿ ಪ್ರಕಟಿಸಿದ ಬೆನ್ನಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಲಸಿಕೆಗಳ ದರ ಪರಿಷ್ಕರಣೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆಗಳ ದರವನ್ನು ಕೇಂದ್ರ ಆರೋಗ್ಯ ಸಚಿವಾಲಯವು ಪರಿಷ್ಕರಣೆ ಮಾಡಿದೆ.
ದೇಶಿ ತಯಾರಿತ ಲಸಿಕೆಗಳಾದ ಕೋವ್ಯಾಕ್ಸಿನ್ ಪ್ರತಿ ಡೋಸ್‌ಗೆ 1,410 ರೂ. ಹಾಗೂ ಕೋವಿಶೀಲ್ಡ್ ಬೆಲೆ 780 ರೂ. ಎಂದು ನಿಗದಿಪಡಿಸಲಾಗಿದೆ. ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಗೆ 1,145 ರೂ.ಗಳನ್ನು ಸಚಿವಾಲಯವು ನಿಗದಿ ಮಾಡಿದೆ.
ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮದ ಅನುಷ್ಠಾನಕ್ಕೆ ಜೂನ್ 8ರಂದು ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪ್ರಮಾಣಗಳ ಬೆಲೆ ಆಯಾ ಲಸಿಕೆ ತಯಾರಕರು ಘೋಷಿಸಿದ್ದು ಮತ್ತು ನಂತರದ ದಿನಗಳಲ್ಲಿ ಯಾವುದೇ ಬದಲಾವಣೆಗಳಾದರೂ ಸಹ ಮುಂಚಿತವಾಗಿ ತಿಳಿಸಲಾಗವುದು ಎಂದಿದೆ.
ಖಾಸಗಿ ಆಸ್ಪತ್ರೆಗಳು ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ ಗರಿಷ್ಠ 150 ರೂ.ವರೆಗೆ ವಿಧಿಸಬಹುದು. ರಾಜ್ಯ ಸರ್ಕಾರಗಳು ವಿಧಿಸುವ ಬೆಲೆಯನ್ನು ಮೇಲ್ವಿಚಾರಣೆ ಮಾಡಬಹುದು ಎಂದು ತಿಳಿಸಲಾಗಿದೆ. ಕೇಂದ್ರ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯರಿಗೆ ಉಚಿತ ಕೋವಿಡ್-19 ಲಸಿಕೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ಕಂಡುಬಂದಿದೆ.
ರಾಜ್ಯಗಳಿಗೆ ನೀಡಲಾದ ಶೇ.75ರಷ್ಟು ಉತ್ಪಾದನೆಯ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಮತ್ತು ರಾಜ್ಯಗಳಿಗೆ ಉಚಿತವಾಗಿ ಲಸಿಕೆ ಒದಗಿಸಲಿದೆ. ಆದರೂ, ಖಾಸಗಿ ಆಸ್ಪತ್ರೆಗಳು ಈ ಹಿಂದಿನ ಶೇ.25ರಷ್ಟು ಲಸಿಕೆಗಳ ಖರೀದಿ ಮುಂದುವರೆಸಬಹುದು. ಆದರೆ, ಸೇವಾ ಶುಲ್ಕವನ್ನು ಮಿತಿಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ಸೋಮವಾರ ತಿಳಿಸಿದ್ದರು.
ಇದನ್ನೂ ಓದಿ: ತರಕಾರಿ ಚೀಲಗಳಡಿ ಅಡಗಿಸಿಟ್ಟು ತಮಿಳುನಾಡಿಗೆ ಸಾಗಿಸುತ್ತಿದ್ದ ಮದ್ಯ ವಶಕ್ಕೆ