ನವದೆಹಲಿ: ಚಿನ್ನ ಖರೀದಿದಾರರಿಗೆ ಕೇಂದ್ರ ಶಾಕ್ ನೀಡಿದೆ. ಹಳದಿ ಲೋಹದ ಮೇಲಿನ ಆಮದು ಸುಂಕ ಹೆಚ್ಚಿಸಿದೆ. ಆಮದು ಸುಂಕವನ್ನು ಈಗಿರುವ ಶೇ.10.75 ರಿಂದ ಶೇ.15ಕ್ಕೆ ಹೆಚ್ಚಿಸಲಾಗಿದೆ. ಚಿನ್ನದ ಆಮದು ಹೆಚ್ಚುತ್ತಿರುವ ಹಿನ್ನೆಲೆ ಚಾಲ್ತಿ ಖಾತೆ ಕೊರತೆ ನೀಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಬದಲಾವಣೆಗಳು ಜೂನ್ 30 ರಿಂದ ಜಾರಿಗೆ ಬರಲಿವೆ.
ಈ ಹಿಂದೆ ಚಿನ್ನದ ಮೇಲಿನ ಮೂಲ ಆಮದು ತೆರಿಗೆ ಶೇ.7.5 ಇತ್ತು. ಈಗ ಅದು ಶೇ.12.5ಕ್ಕೆ ತಲುಪಿದೆ. 2.5 ರಷ್ಟು ಕೃಷಿ ಮೂಲ ಸೌಕರ್ಯ ಸೆಸ್ ಅನ್ನು ಇದಕ್ಕೆ ಸೇರಿಸಲಾಗುತ್ತದೆ. ಇದರೊಂದಿಗೆ ಚಿನ್ನದ ಮೇಲಿನ ಆಮದು ತೆರಿಗೆ ಶೇ.15ಕ್ಕೆ ತಲುಪಿದೆ. ಈ ಮೊತ್ತಕ್ಕೆ 3 ಪ್ರತಿಶತ ಜಿಎಸ್‌ಟಿ ಸೇರಿಸಲಾಗುತ್ತದೆ. ಹೆಚ್ಚಿದ ಆಮದು ಸುಂಕದಿಂದ ಚಿನ್ನ ಖರೀದಿ ಹೊರೆಯಾಗಲಿದೆ.
ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ- ಬೆಳ್ಳಿ ದರ..ಬಂಗಾರ ಬೆಲೆಯಲ್ಲಿ ಹೆಚ್ಚಳ!
ಏಕೆ ಹೆಚ್ಚಳ..?: ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿದೆ. ಈ ಮೂಲಕ ರೂಪಾಯಿ ಮೇಲಿನ ಒತ್ತಡ ತಗ್ಗಿಸಲು ಕೇಂದ್ರ ಕ್ರಮ ಕೈಗೊಂಡಿದೆ. ಅದರಲ್ಲೂ ಚಿನ್ನದ ಆಮದು ಹೆಚ್ಚಿರುವ ಹಿನ್ನೆಲೆ ಈ ಬಗ್ಗೆ ಗಮನ ಹರಿಸಲಾಗಿದೆ. ಮೇ ತಿಂಗಳಲ್ಲಿ ದೇಶಕ್ಕೆ 107 ಟನ್ ಚಿನ್ನ ಆಮದಾಗಿದ್ದರೆ, ಜೂನ್ ತಿಂಗಳಲ್ಲೂ ಅಷ್ಟೇ ಪ್ರಮಾಣದ ಚಿನ್ನ ಭಾರತಕ್ಕೆ ಬಂದಿದೆ. ಇದರಿಂದಾಗಿ ಚಿನ್ನದ ಚಾಲ್ತಿ ಖಾತೆ ಕೊರತೆ ಹೆಚ್ಚುತ್ತಿದ್ದು, ಆಮದು ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಈ ಹಿಂದೆ, ದೇಶದ ಪ್ರಮುಖ ಆಭರಣ ವ್ಯಾಪಾರಿಗಳು ಚಿನ್ನದ ಕಳ್ಳಸಾಗಣೆ ಕಡಿಮೆ ಮಾಡಲು ಚಿನ್ನದ ಆಮದು ಸುಂಕವನ್ನು ಶೇಕಡಾ 7.5 ರಿಂದ ಶೇಕಡಾ 4 ಕ್ಕೆ ಇಳಿಸುವಂತೆ ಸರ್ಕಾರವನ್ನು ಕೋರಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರ ಆಮದು ಸುಂಕ ಹೆಚ್ಚಿಸಿರುವುದು ಗಮನಾರ್ಹ. ಇದರೊಂದಿಗೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಚೀನಾ, ಅಮೆರಿಕ ಮತ್ತು ಸಿಂಗಾಪುರದಂತಹ ದೇಶಗಳು ಚಿನ್ನದ ಮೇಲಿನ ಆಮದು ಸುಂಕವನ್ನು ತೆಗೆದುಹಾಕಿವೆ.