ನವದೆಹಲಿ: ಬಳಕೆದಾರರು ದೂರು ನೀಡಿದ ಕಾರಣ ಕಳೆದ ಮೇ ತಿಂಗಳಲ್ಲಿ 71,132 ಹಾಗು ಜೂನ್‌ನಲ್ಲಿ 83,613 ಆಕ್ಷೇಪಾರ್ಹ ಮಾಹಿತಿ ತುಣುಕುಗಳನ್ನು ಗೂಗಲ್ ತೆಗೆದುಹಾಕಿದೆ. ಈ ವಿಚಾರವನ್ನು ಕಂಪನಿ ಬಿಡುಗಡೆ ಮಾಡಿದ ಮಾಸಿಕ ಪಾರದರ್ಶಕತೆ ವರದಿಯಲ್ಲಿ ತಿಳಿಸಿದೆ.
ಬಳಕೆದಾರರಿಂದ ಬಂದ ವರದಿಗಳ ಜೊತೆಗೆ, ಸ್ವಯಂಚಾಲಿತ ಪತ್ತೆ ಕ್ರಮದ ಪರಿಣಾಮವಾಗಿ ಗೂಗಲ್ ಮೇ ತಿಂಗಳಲ್ಲಿ 6,34,357 ಮತ್ತು ಜೂನ್‌ನಲ್ಲಿ 5,26,866 ವಿವಾದಿತ ಅಂಶಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮೇ 26 ರಿಂದ ಜಾರಿಗೆ ಬಂದ ಭಾರತದ ಐಟಿ ನಿಯಮಗಳನ್ನು ಪಾಲಿಸುವ ಭಾಗವಾಗಿ ಅಮೆರಿಕ ಮೂಲದ ದೈತ್ಯ ಕಂಪನಿ ಇದೀಗ ಈ ಪ್ರಕಟಣೆ ಹೊರಡಿಸಿದೆ.
ಸ್ಥಳೀಯ ಕಾನೂನುಗಳು ಅಥವಾ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಆರೋಪದ ಮೇಲೆ ಭಾರತದ ವೈಯಕ್ತಿಕ ಬಳಕೆದಾರರಿಂದ ಈ ವರ್ಷದ ಏಪ್ರಿಲ್‌ನಲ್ಲಿ 27,700 ಕ್ಕೂ ಹೆಚ್ಚು ದೂರುಗಳು ಬಂದಿವೆ. ಹಾಗೆಯೇ ಇದರಿಂದಾಗಿ 59,350 ಮಾನಹಾನಿ, ಆಕ್ಷೇಪಾರ್ಹ ವಿಚಾರಗಳನ್ನು ರಿಮೂವ್ ಮಾಡಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ಗೊತ್ತುಪಡಿಸಿದ ಕಾರ್ಯವಿಧಾನಗಳ ಮೂಲಕ ಭಾರತದಲ್ಲಿರುವ ವೈಯಕ್ತಿಕ ಬಳಕೆದಾರರಿಂದ 34,883 ದೂರುಗಳನ್ನು ಸ್ವೀಕರಿಸಲಾಗಿದೆ. ಬಳಕೆದಾರರ ದೂರುಗಳ ಪರಿಣಾಮವಾಗಿ ತೆಗೆದುಹಾಕುವ ತುಣುಕುಗಳ ಸಂಖ್ಯೆ 71,132 ಆಗಿದೆ ಎಂದಿದೆ.