ಶಬರಿಮಲೈ(ಕೇರಳ): ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ದಕ್ಷಿಣ ಭಾರತದ ಪ್ರಸಿದ್ಧ ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ ಸೋರುತ್ತಿದೆ ಎಂದು ತಿಳಿದು ಬಂದಿದೆ. ಪ್ರವೇಶ ದ್ವಾರದ ಎಡಭಾಗದಲ್ಲಿರುವ ಗರ್ಭಗುಡಿಯ ಹೊರ ಗೋಡೆಯ ಮೂಲಕ ನೀರು ಹೊರಬರುತ್ತಿದೆ. ಇದನ್ನ ಸರಿಪಡಿಸಲು ಇದೀಗ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ನಿರ್ಧರಿಸಿದ್ದು, ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದೆ.
ಜುಲೈ 16ರಂದು ಮಾಸಿಕ ಪೂಜೆಗೋಸ್ಕರ ದೇವಸ್ಥಾನದ ಬಾಗಿಲು ಓಪನ್ ಮಾಡಲಾಗಿದ್ದು, ಈ ವೇಳೆ ವಿಗ್ರಹದ ಮೇಲೆ ನೀರು ಜಿನುಗುತ್ತಿರುವುದು ಕಂಡು ಬಂದಿದೆ. ಆಗಸ್ಟ್ 3ರಂದು ದೇವಾಲಯದ ವಸ್ತುಶಾಸ್ತ್ರದ ತಜ್ಞರ ತಂಡ ಛಾವಣಿಯ ಪರಿಶೀಲನೆ ನಡೆಸಲಿದ್ದು, ತದನಂತರ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಟಿಡಿಬಿ ಅಧ್ಯಕ್ಷ ಕೆ. ಅನಂತಗೋಪನ್, ಗರ್ಭಗುಡಿಯ ಮುಂಭಾಗದ ಎಡ ಮೂಲೆಯಲ್ಲಿ ಸೋರಿಕೆಯಾಗುತ್ತಿರುವುದು ಪತ್ತೆಯಾಗಿದೆ. ಶೀಘ್ರದಲ್ಲೇ ಅದನ್ನ ಸರಿಪಡಿಸಲಾಗುವುದು ಎಂದಿದ್ದಾರೆ. ಬಂಗಾರದ ಮಾಳಿಗೆ ಆಗಿರುವ ಕಾರಣ ಇದರ ಕಾರ್ಯಕ್ಕೆ ತಗುಲುವ ವೆಚ್ಚವನ್ನ ಸಂಪೂರ್ಣವಾಗಿ ಮಂಡಳಿ ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ. ಈ ದುರಸ್ತಿ ಕಾರ್ಯ 45 ದಿನಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: Jallianwala Bagh: ಶಾಹೀದ್ ಬಾವಿಗೆ ನಾಣ್ಯ ಹಾಕುವುದನ್ನು ನಿಷೇಧಿಸಿದ ಸರ್ಕಾರ
ಮದ್ಯದ ದೊರೆ ವಿಜಯ್ ಮಲ್ಯ 1998ರಲ್ಲಿ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಮೇಲ್ಛಾವಣಿಯ ಚಿನ್ನದ ಲೇಪನ ನೀಡಿದ್ದರು. ಇದಕ್ಕಾಗಿ 31 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರ ದಾನವಾಗಿ ನೀಡಿದ್ದರು.