ಬಿಲಾಸ್‌ಪುರ್ (ಛತ್ತೀಸ್ಗಢ) : ಕಣ್ಣಿಲ್ಲದೇ ಆಸ್ತಿ, ಅಂತಸ್ತು ಇದ್ದರೆ ಏನು ಪ್ರಯೋಜನ ಎನ್ನುವ ಮಾತಿದೆ. ಎರಡೂ ಕಣ್ಣುಗಳಿರದ ವಿಶೇಷ ಚೇತನರು ತಮ್ಮ ಕುಟುಂಬವನ್ನು ನಿರ್ವಹಿಸಬಹುದೇ? ಎಂದು ಕೇಳಿದರೆ ಖಂಡಿತ ನಿಮ್ಮ ಉತ್ತರ ಇಲ್ಲ ಎಂದು ಆಗಿರಬಹುದು. ಆದರೆ, ಆ ಮಾತನ್ನು ಘನ್ಶ್ಯಾಮ್ ವೈಷ್ಣವ್ ಬಿಲಾಸ್‌ಪುರ್ ಸುಳ್ಳಾಗಿಸಿದ್ದಾರೆ.
ಬಿಲಾಸ್‌ಪುರದ ಸಕ್ರಿ ನಿವಾಸಿ ಘನ್ಶ್ಯಾಮ್ ವೈಷ್ಣವ್ ಅವರಿಗೆ ಬಾಲ್ಯದಿಂದಲೂ ಕಣ್ಣು ಕಾಣುವುದಿಲ್ಲ. ಪ್ರಪಂಚವನ್ನು ನೋಡುವ ಅವಕಾಶವಿಲ್ಲದಿದ್ದರೂ ಅವರ ಪ್ರತಿಭೆಗೇನೂ ಕೊರತೆಯಿಲ್ಲ. ಇವರಿಗೆ ತಮ್ಮ ಕಂಠದಿಂದ ಹಕ್ಕಿಗಳ ಸದ್ದು, ವಾಹನಗಳ ಸದ್ದು, ಆ್ಯಂಬುಲೆನ್ಸ್ ಸದ್ದುಗಳನ್ನು ಮಾಡುವ ಪ್ರತಿಭೆಯಿದೆ. ಈ ವಿಶೇಷ ಧ್ವನಿಯ ಮೂಲಕವೇ ತನ್ನನ್ನು ಮತ್ತು ತನ್ನ ತಾಯಿಯನ್ನು ಪೋಷಿಸುತ್ತಾರೆ ಘನ್ಶ್ಯಾಮ್ ವೈಷ್ಣವ್ ಬಿಲಾಸ್‌ಪುರ್.
ಹುಟ್ಟಿದ ಮೂರು ತಿಂಗಳಲ್ಲೇ ಘನ್ಶ್ಯಾಮ್ ವೈಷ್ಣವ್ ತಮ್ಮ ದೃಷ್ಟಿ ಕಳೆದುಕೊಂಡಿದ್ದರು. ಬಡತನದಿಂದಾಗಿ ಕಣ್ಣುಗಳಿಗೆ ಸರಿಯಾದ ಚಿಕಿತ್ಸೆ ನೀಡಲಾಗಲಿಲ್ಲ. 4 ವರ್ಷ ಇರುವಾಗ ಲಘು ತಲೆನೋವು ಕೂಡ ಆರಂಭವಾಯಿತು. ಅಷ್ಟರಲ್ಲಾಗಲೇ ತಂದೆ ತೀರಿಕೊಂಡಿದ್ದು, ಬಡತನದ ಹಿನ್ನೆಲೆ ಚಿಕಿತ್ಸೆ ಕೂಡ ಸಿಗಲಿಲ್ಲ. ಒಂದು ರೀತಿಯ ನರಕಯಾತನೆ ಆರಂಭ ಆಯಿತು. ಆದ್ರೆ, ಘನ್ಶ್ಯಾಮ್ ಯಾವುದಕ್ಕೂ ಕುಗ್ಗದೇ ಆತ್ಮ ವಿಶ್ವಾಸದಿಂದ ಮುಂದೆ ಸಾಗಿದರು.
ಘನ್ಶ್ಯಾಮ್ ತನ್ನ ವೃದ್ಧ ತಾಯಿ ಮತ್ತು ತನಗಾಗಿ ಅಲ್ಪಸ್ವಲ್ಪ ಆಹಾರ ತರಲು ಮನೆಯಿಂದ ನಗರಕ್ಕೆ ನಡೆಯುತ್ತಾರೆ. ಬಿಲಾಸ್‌ಪುರ ನಗರದಿಂದ 10 ಕಿ.ಮೀ ದೂರದಲ್ಲಿದೆ ಈ ಸಕ್ರಿ ಗ್ರಾಮ. ದೃಷ್ಟಿ ಇರದಿದ್ದರೂ ಸ್ವಾಭಿಮಾನಕ್ಕೆ ಹೆಸರುವಾಸಿ ಘನ್ಶ್ಯಾಮ್. ಭಿಕ್ಷೆ ಬೇಡುವ ಬದಲು ತಮಗಿರುವ ಪ್ರತಿಭೆ ಬಳಸಿಕೊಂಡು ಜನಮನ ಗೆದ್ದು, ಸಿಕ್ಕ ಅಲ್ಪ ಮೊತ್ತದಲ್ಲಿ ಜೀವನ ನಡೆಸುತ್ತಿದ್ದಾರೆ.
ತಂದೆಯ ಮರಣದ ನಂತರ ಸಂಸಾರದ ಜವಾಬ್ದಾರಿ ಘನ್ಶ್ಯಾಮ್ ಹೆಗಲ ಮೇಲೆ ಬಿತ್ತು. ಅವರಿಗೆ ಮೂವರು ಸಹೋದರರು ಮತ್ತು ಓರ್ವ ಸಹೋದರಿಯಿದ್ದು, ತಂಗಿಗೆ ಮದುವೆಯಾಗಿದೆ. ಸಹೋದರರು ಘನ್ಶ್ಯಾಮ್ನಿಂದ ದೂರವಾಗಿದ್ದು, ಇದೀಗ ತನ್ನ ತಾಯಿಯೊಂದಿಗೆ ಇದ್ದಾರೆ. ಮಗನ ಕಣ್ಣಿನ ಸಮಸ್ಯೆ ಹಿನ್ನೆಲೆ, ತಾಯಿ ಕೂಲಿ ಮಾಡಲು ನಿರ್ಧರಿಸಿದ್ದು, ಅದನ್ನು ಘನ್ಶ್ಯಾಮ್ ಒಪ್ಪಲಿಲ್ಲ. ಇದೀಗ ತಮ್ಮ ಮಧುರ ಕಂಠದ ಸಹಾಯದಿಂದ ತಮ್ಮ ಜೀವನವನ್ನು ತಾವೇ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಆರೋಪ-ಪ್ರತ್ಯಾರೋಪ.. ಪಂಚಾಯ್ತಿಯಲ್ಲಿ ಮಹಿಳೆಯನ್ನು ಅರೆಬೆತ್ತೆಲೆಗೊಳಿಸಿ ಮನಬಂದಂತೆ ಥಳಿಸಿದ ಯುವಕ!
ಹೀಗೆ ಘನ್ಶ್ಯಾಮ್ ಅವರ ಕೌಶಲ್ಯದ ಪ್ರಯಾಣ ಪ್ರಾರಂಭವಾಯಿತು. ಕೈಯಲ್ಲಿ ಕೋಲು ಹಿಡಿದು ನಗರದ ರಸ್ತೆಯಲ್ಲಿ ಸಾಗುತ್ತಾ ಹಕ್ಕಿಗಳ, ನಾನಾ ವಾಹನಗಳ ಸದ್ದುಗಳನ್ನು ತಮ್ಮ ಬಾಯಿಯಿಂದ ಮೊಳಗಿಸುತ್ತಾರೆ. ಇದನ್ನು ಜನ ಮೆಚ್ಚಿ ಹಣ ನೀಡಲು ಪ್ರಾರಂಭಿಸಿದರು. ಹೀಗೆ ಅಲ್ಪ ಸ್ವಲ್ಪ ಹಣ ಗಳಿಸಿ ಜೀವನ ಬಂಡಿ ದೂಡುತ್ತಿದ್ದಾರೆ.
ಇನ್ನೂ ಘನ್ಶ್ಯಾಮ್ ಅವರ ತಾಯಿ ಮಾತನಾಡಿ, ಈ ಸ್ಥಿತಿಯಲ್ಲಿದ್ದರೂ ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನ ನಮಗೆ ಸಿಗುತ್ತಿಲ್ಲ. ಮಗನ ಬಳಿ ಪಡಿತರ ಚೀಟಿಯಾಗಲಿ, ಚಿಕಿತ್ಸೆಗಾಗಿ ಯಾವುದೇ ಕಾರ್ಡ್ ಆಗಲಿ ಇಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಚೇರಿಗೆ ಅಲೆದಾಡಿದರೂ ಯಾರೂ ಕೇಳಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.