ಶೆರ್ಪುರ(ಬಿಹಾರ) : ಬಿಹಾರದ ಪ್ರಾಥಮಿಕ ಮತ್ತು ಮಾಧ್ಯಮ ಶಾಲೆಗಳಲ್ಲಿ ‘ಸಾವಯವ ಕಿಚನ್-ಗಾರ್ಡನ್ಸ್’ ಎಂಬ ವಿಶೇಷ ಯೋಜನೆ ಪ್ರಗತಿಯಲ್ಲಿದೆ. ಸರ್ಕಾರ ರೂಪಿಸಿದ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ವಿಚಾರದಲ್ಲಿ ಗಯಾದ ಶೆರ್ಪುರದ ಈ ಶಾಲೆ ವಿಶೇಷ ಗಮನ ಸೆಳೆದಿದೆ.
ಶೆರ್ಪುರ ಶಾಲೆಯ ಪ್ರಾಂಶುಪಾಲ ಅಖ್ತರ್ ಹುಸೇನ್ ಅವರ ಈ ವಿನೂತನ ಉಪಾಯ ಇದೀಗ ಎಲ್ಲರ ಕುತೂಹಲದ ಕಣಜ. ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ತಾಜಾ ಹಸಿರು ತರಕಾರಿಗಳನ್ನು ಪೂರೈಸಲು ಈ ಯೋಜನೆ ರೂಪಿಸಲಾಗಿದೆ.
ಶೆರ್ಪುರದ ಪ್ರಾಥಮಿಕ ಶಾಲೆಗಳು ಈ ಉಪಕ್ರಮ ಯಶಸ್ವಿಯಾಗಿ ಜಾರಿಗೂ ತರುತ್ತಿವೆ. ಉದ್ಯಾನದಲ್ಲಿ ಬೆಳೆದ ತರಕಾರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮೂಲಕ ಮಧ್ಯಾಹ್ನದ ಊಟ ತಯಾರಿಕೆಗೆ ಇದೇ ತರಕಾರಿಗಳನ್ನು ಉಪಯೋಗಿಸಲಾಗುತ್ತಿದೆ.
ಗಯಾದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಈ ಗ್ರಾಮ ಇದೀಗ ಸ್ಥಳೀಯರ ಆಕರ್ಷಣೆಯ ಕೇಂದ್ರವಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ವಿವಿಧ ತರಕಾರಿಗಳ ಬಗೆಗೂ ಅರಿವು ಮೂಡಿಸಲಾಗುತ್ತಿದೆ. ತರಕಾರಿ ಬೆಳೆಯಲು ಅನುಸರಿಸುವ ಮಾರ್ಗಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗುತ್ತಿದೆ.
ಕಿಚನ್ ಗಾರ್ಡನ್ನಿಂದ ತರಕಾರಿಯ ಮಹತ್ವ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಇದರಿಂದ ಅವರು ತಮ್ಮ ಮನೆಗಳಲ್ಲೂ ಇಂತಹ ಪುಟ್ಟದೊಂದು ಕಿಚನ್ ಗಾರ್ಡನ್ ಸಿದ್ಧಗೊಳಿಸಬಹುದು. ಅಖ್ತರ್ ಹುಸೇನ್ ಅವರು ಶಾಲೆಯಲ್ಲಿ ಸರ್ಕಾರದ ಯೋಜನೆ ಜಾರಿಗೊಳಿಸುವ ಜತೆಗೆ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿದ್ದಾರೆ. ಪ್ರತಿ ಶಾಲೆಯೂ ಇಂಥದ್ದೊಂದು ವಿಧಾನ ಅನುಸರಿಸುವ ಮೂಲಕ ಮಾದರಿ ಶಾಲೆಗಳ ಸಾಲಿಗೆ ಸೇರಬಹುದಾಗಿದೆ.