ಶ್ರೀನಗರ, ಜಮ್ಮು ಕಾಶ್ಮೀರ: ಗಾಲ್ವಾನ್ ಕಣಿವೆಯಲ್ಲಿ ಭಾರತದ ವೀರ ಯೋಧರು ಹುತಾತ್ಮರಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಹುತಾತ್ಮರಿಗೆ ಭಾರತೀಯ ಸೇನೆ ಮಂಗಳವಾರ ಗೌರವ ಸಲ್ಲಿಸಿದೆ.
ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಮತ್ತು ಹಲವು ಸೇನಾ ಪಡೆಗಳ ಉನ್ನತಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಶೌರ್ಯವನ್ನು ರಾಷ್ಟ್ರದ ಸ್ಮಾರಕದಲ್ಲಿ ಶಾಶ್ವತವಾಗಿ ಕೆತ್ತಲಾಗುವುದು ಎಂದು ಭಾರತೀಯ ಸೇನೆ ಘೋಷಿಸಿದೆ.
ಇದರ ಜೊತೆಗೆ ಅತ್ಯಂತ ಕಷ್ಟಕರವಾದ ಸನ್ನಿವೇಶದಲ್ಲಿ ದೇಶಕ್ಕಾಗಿ ಹೋರಾಡಿ, ಪ್ರಾಣ ತ್ಯಾಗ ಮಾಡಿದ ಈ ಧೀರ ಯೋಧರಿಗೆ ರಾಷ್ಟ್ರವು ಶಾಶ್ವತವಾಗಿ ಕೃತಜ್ಞರಾಗಿರಬೇಕು ಎಂದು ಭಾರತೀಯ ಸೇನೆ ಹೇಳಿದೆ.
ಈ ಗೌರವ ಸಲ್ಲಿಕೆ ಸಮಾರಂಭದಲ್ಲಿ ಸಿಒಎಸ್, ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ನ ಮೇಜರ್ ಜನರಲ್ ಆಕಾಶ್ ಕೌಶಿಕ್ ಲೇಹ್‌ನ ಅಪ್ರತಿಮ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ, ಯೋಧರ ತ್ಯಾಗವನ್ನು ಸ್ಮರಿಸಿದರು.
ಇದನ್ನೂ ಓದಿ: ಟ್ವಿಟರ್ಗೆ ಸಂಸತ್ನ ಸ್ಥಾಯಿ ಸಮಿತಿಯಿಂದ ಸಮನ್ಸ್
2020ರ ಜೂನ್ 15ರ ರಾತ್ರಿ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ತೀವ್ರ ಘರ್ಷಣೆಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಚೀನಾ ಕಡೆ ಸುಮಾರು 40ಕ್ಕೂ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಚೀನಾ ಅಧಿಕೃತವಾಗಿ ಏನನ್ನೂ ಹೇಳಿಲ್ಲ.