ನವದೆಹಲಿ: ಆತ ದೇವಸ್ಥಾನವೊಂದರಲ್ಲಿ ಬಂಧಿಯಾಗಿ ತನ್ನ ನೋವನ್ನು ಹೇಳಿಕೊಳ್ಳಲು ಯಾರೂ ಇಲ್ಲದೆ ನರಕಯಾತನೆ ಅನುಭವಿಸಿದ್ದ. ಬಾಲ್ಯದಲ್ಲೇ ಒಬ್ಬಂಟಿಯಾಗಿ ಬಂಧನಕ್ಕೊಳಗಾದ ಆತ, ಈಗ ಬಂಧ ಮುಕ್ತನಾಗಿ ತನ್ನ ಸುಂದರ ವಾಸಸ್ಥಾನಕ್ಕೆ ಮರಳಿದ್ದಾನೆ. ಈ ಮೂಲಕ ಆತನ ಬಾಳಲ್ಲಿ ಸಂತೊಷ ಮರಳಿ ಬಂದಿದೆ.
ನಾವು ಹೇಳಲು ಹೋರಟಿರುವ ಕಥೆ, ಸುಂದರ್ ಎಂಬ ಗಂಡಾನೆಯದ್ದಾಗಿದೆ. ಹೌದು, ಮಹಾರಾಷ್ಟ್ರದ ಪಶ್ಚಿಮದಲ್ಲಿ ಪಂಚಗಂಗಾ ನದಿಯ ದಡದಲ್ಲಿರುವ ನಗರ ಕೊಲ್ಲಾಪುರದ ದೇವಾಲಯವೊಂದರಲ್ಲಿ ಏಳು ವರ್ಷಗಳ ಕಾಲ ಒಂಟಿಯಾಗಿ ಬಂಧನಕ್ಕೊಳಗಾದ ಸುಂದರ್ ಹೆಸರಿನ ಆನೆಯೊಂದರ ಕಥೆಯಾಗಿದೆ ಇದು.
ಸುಂದರ್‌ನ ಜೀವನ 2014 ಕ್ಕಿಂತ ಮೊದಲು ಅಷ್ಟು ಸಂತೋಷದಾಯಕವಾಗಿರಲಿಲ್ಲ. 2007 ರಲ್ಲಿ ಕೊಲ್ಲಾಪುರದ ದೇವಸ್ಥಾನಕ್ಕೆ ಉಡುಗೊರೆಯಾಗಿ ಸುಂದರ್ ಅನ್ನು ನೀಡಲಾಗಿತ್ತು. ಸಣ್ಣ ವಯಸ್ಸಿನಲ್ಲೇ ಒಬ್ಬಂಟಿಯಾದ ಸುಂದರ್, ತನ್ನ ಸಂತೋಷವನ್ನು ಕಳೆದುಕೊಂಡಿದ್ದ. ಹಲವು ವರ್ಷಗಳ ಕಾಲ ಹೊರಗಡೆ ಓಡಾಡಲು ಸಾಧ್ಯವಾಗದೆ ನರಕಯಾತನೆ ಅನಭವಿಸುತ್ತಿದ್ದ ಸುಂದರ್ ಬಗ್ಗೆ, 2014 ರಲ್ಲಿ ಪೀಪಲ್ಸ್ ಫಾರ್ ದಿ ಎತಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ( ಪೆಟಾ) ಇಂಡಿಯಾ ಮಾಹಿತಿ ಪಡೆದಿತ್ತು.
ಪೆಟಾ ಇಂಡಿಯಾ ಸುಂದರ್‌ನ ದುಸ್ಥಿತಿಯ ಬಗ್ಗೆ ಮಾಹಿತಿ ಪಡೆಯುವಾಗ, ಆತನ ಕಣ್ಣಿಗೆ ಗಾಯವಾಗಿತ್ತು, ಕಿವಿಯಲ್ಲಿ ರಂಧ್ರವಿತ್ತು, ಅವನು ಅನುಭವಿಸಿದ ಕ್ರೌರ್ಯದಿಂದ ಅವನ ದೇಹದ ಮೇಲೆ ಗಾಯಗಳಾಗಿತ್ತು. ಪೇಟಾ ಇಂಡಿಯಾ ಸುಂದರ್ ಬಿಡುಗಡೆಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪೇಟಾದ ಕಾನೂನು ಹೋರಾಟವನ್ನು, ಗಾಯಕ ಪಾಲ್ ಮೆಕ್ಟರ್ನಿ, ನಟಿ ಪಮೇಲಾ ಆಂಡರ್ಸನ್ ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಲಕ್ಷಾಂತರ ಜನರು ಬೆಂಬಲಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಪೇಟಾ ಪರವಾಗಿ ತೀರ್ಪು ಕೂಡ ಕೊಟ್ಟಿತ್ತು. ಸುಪ್ರೀಂ ತೀರ್ಪು ಅನುಸರಿಸಿ, 2014 ರಲ್ಲಿ ಸುಂದರ್ ಸುರ್ಧೀಘ ಬಂಧನದಿಂದ ಮುಕ್ತವಾಗಿದ್ದ. ಬಳಿಕ ಹೊಸ ವಾಸಸ್ಥಾನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಗೊಂಡಿದ್ದ. ಈ ಮೂಲಕ ಆತ ಇತರ ಆನೆಗಳಂತೆ ನೀರಿನಲ್ಲಿ ಆಡುವ, ಸ್ವತಂತ್ರವಾಗಿ ಓಡಾಡುವ ಅವಕಾಶ ಪಡೆದಿದ್ದ.
ಪ್ರಸ್ತುತ 21 ವರ್ಷ ಪ್ರಾಯದ ಸುಂದರ್, ತನ್ನ ಹೊಸ ವಾಸಸ್ಥಾನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸ್ವತಂತ್ರವಾಗಿ ಓಡಾಡುತಿದ್ದಾನೆ. ತನ್ನ ಇನ್ನುಳಿದ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾನೆ. ಈಗ ಆತನ ಇತರ ಆನೆಗಳೊಂದಿಗೆ ಸೇರಿ ಪಳಗಿದ್ದಾನೆ. ಹೀಗಾಗಿ, ಆರು ವರ್ಷಗಳ ಬಳಿಕ ಸುಂದರ್, ಸುಂದರ ಜೀವನಕ್ಕೆ ಮರಳಿದ್ದಾನೆ.
ಸರಪಳಿಗಳಿಂದ ಬಂಧಿತನಾಗಿದ್ದ, ಹೊಡೆತ ತಿಂದು ಗಾಯಗೊಂಡಿದ್ದ ಸುಂದರ್ನನ್ನು ರಕ್ಷಿಸಿರುವುದು ಕೇವಲ ಒಂದು ಕಾರ್ಯಾಚರಣೆಯಾಗಿದೆ. ಇದೇ ತರ, ಸರ್ಕಸ್ , ಸವಾರಿಗಳಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿರುವ ಇನ್ನೂ ಅನೇಕ ಆನೆಗಳನ್ನು ಬಂಧಮುಕ್ತಗೊಳಿಸುವಲ್ಲಿ ನಾವು ಶ್ರಮಿಸುತ್ತೇವೆ ಎಂದು ಪೆಟಾ ಇಂಡಿಯಾದ ಸಿಇಒ ಡಾ.ಮನಿಲಾಲ್ ವಲ್ಲಿಯೇಟ್ ಹೇಳಿದ್ದಾರೆ.
ಸುಂದರ್ ನಮ್ಮ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕುಟುಂಬದ ಭಾಗವಾಗಿದ್ದು ನಮ್ಮ ಭಾಗ್ಯ. ಆತ, ಇತರ ಆನೆಗಳೊಂದಿಗೆ ಸೇರುತ್ತಾನೆ, ಆತನ ಪಾಲಕರನ್ನು ಸೌಮ್ಯ ಸ್ವಭಾವದಿಂದ ಕಾಣುತ್ತಾನೆ ಎಂದು ಬನ್ನೇರುಘಟ್ಟ ಉದ್ಯಾನವನದ ಮುಖ್ಯ ಸಂರಕ್ಷಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.