ಪಾರ್ವತಿಪುರಂ ಮಾನ್ಯಂ (ಆಂಧ್ರಪ್ರದೇಶ): ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಆರು ಆನೆಗಳ ಪೈಕಿ ನಾಲ್ಕು ಆನೆಗಳು ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿವೆ. ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಭಾಮಿನಿ ತಾಲೂಕಿನ ಕತ್ರಗಡ-ಬಿ ಎಂಬಲ್ಲಿ ಗುರುವಾರ ರಾತ್ರಿ ಆನೆಗಳು ವಿದ್ಯುತ್ ಸ್ಪರ್ಶಿಸಿ ಅಸುನೀಗಿವೆ.
ಆರು ತಿಂಗಳ ಹಿಂದೆ ಒಡಿಶಾದಿಂದ ಆರು ಆನೆಗಳ ಹಿಂಡು ಈ ಪ್ರದೇಶಕ್ಕೆ ಬಂದಿದ್ದವು. ಕಾತ್ರಗಡ-ಬಿ, ಪಕ್ಕುಡಿಭದ್ರಾ ನಡುವಿನ ಗದ್ದೆಯಲ್ಲಿ ಸಂಚರಿಸುತ್ತಿದ್ದಾಗ ಆನೆ ಮರಿಯೊಂದಕ್ಕೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಮರಿ ಆನೆಯನ್ನು ಸ್ಪರ್ಶಿಸಿದ ಬಳಿಕ ಉಳಿದ ಮೂರು ಆನೆಗಳಿಗೂ ವಿದ್ಯುತ್ ಪ್ರವಹಿಸಿದ್ದು ಅವುಗೂ ಸಹ ಸಾವನ್ನಪ್ಪಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಗುಂಪಿನಲ್ಲಿದ್ದ ಎರಡು ಆನೆಗಳು ಪಾರಾಗಿ ಸಮೀಪದ ತುವ್ವಕೊಂಡ ಕಡೆಗೆ ತೆರಳಿವೆ. ತಮ್ಮ ಗುಂಪಿನಲ್ಲಿದ್ದ ನಾಲ್ಕು ಆನೆಗಳು ಕಾಣೆಯಾಗಿ ಬೇಸರಗೊಂಡು ಉಳಿದ ಎರಡು ಆನೆಗಳು ದಾಳಿ ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ಜನರು ಇದರಿಂದ ದೂರವಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಆನೆಗಳ ಶವವನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕಂದಾಯ ಸಿಬ್ಬಂದಿ ಪಂಚನಾಮೆ ನಡೆಸಿದ ನಂತರ ವಿಶಾಖಪಟ್ಟಣದ ಇಂದಿರಾಗಾಂಧಿ ಮೃಗಾಲಯದ ತಜ್ಞರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಅವುಗಳನ್ನು ಸಮಾಧಿ ಮಾಡಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಆನೆ ಕಾಲಿಗೆ ಬಿದ್ದ ವ್ಯಕ್ತಿ: 10 ಸಾವಿರ ದಂಡ ವಿಧಿಸಿದ ಅರಣ್ಯ ಇಲಾಖೆ - ವಿಡಿಯೋ ವೈರಲ್