ಅಯೋಧ್ಯೆ: ಸುಪ್ರೀಂಕೋರ್ಟ್ನ ಆದೇಶದಂತೆ ಅಯೋಧ್ಯೆ ನಗರದ ಧನ್ನಿಪುರ ಗ್ರಾಮದಲ್ಲಿ ಮಸೀದಿಯ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯ ನೆರವೇರಿದೆ. ಇದಕ್ಕೂ ಮೊದಲು ಇಂಡೋ ಗಲ್ಫ್ ಸಾಂಸ್ಕೃತಿಕ ಸಂಘಟನೆ(ಐಐಸಿಎಫ್)ಯ ಸದಸ್ಯರು ಗಿಡಗಳನ್ನು ನೆಟ್ಟಿದ್ದಾರೆ.
ಶಂಕಸ್ಥಾಪನೆ ವೇಳೆ ಈ ಮಸೀದಿ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ, ಬ್ರಿಟಿಷರ ವಿರುದ್ಧ ಅವಧ್ನಲ್ಲಿ ಹೋರಾಡಿದ, ಲೈಟ್ಹೌಸ್ ಆಫ್ ರೆಬೆಲಿಯನ್ ಎಂದು ಕರೆಸಿಕೊಳ್ಳುತ್ತಿದ್ದ ಅಹಮದುಲ್ಲಾ ಶಾ ಅವರಿಗೆ ಅರ್ಪಣೆ ಎಂದು ಐಐಸಿಎಫ್ ಹೇಳಿದೆ.
ಈ ಮೂಲಕ ನಿರ್ಮಾಣವಾಗಲಿರುವ ಮಸೀದಿಯ ಒಂದು ಭಾಗಕ್ಕೆ ಅಹಮದುಲ್ಲಾ ಅವರ ಹೆಸರು ಇಡಲಾಗುತ್ತದೆ ಎಂದು ಐಐಸಿಎಫ್ ಕಾರ್ಯದರ್ಶಿ ಅರ್ಥರ್ ಹುಸೇನ್ ಹೇಳಿದ್ದು, ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಹೋಗಿ ಗಾಯಗೊಂಡಿದ್ದ ರೈತ ಸಾವು
ಮಸೀದಿಯ ನಿರ್ಮಾಣದಿಂದ ಸ್ಥಳೀಯರು ತುಂಬಾ ಖುಷಿಯಾಗಿದ್ದಾರೆ. ಅದರಲ್ಲೂ ಧನ್ನಿಪುರ ಗ್ರಾಮದ ಮುಸ್ಲಿಂ ಸಮುದಾಯ ತಮ್ಮ ಗ್ರಾಮದಲ್ಲಿ ಬೃಹತ್ ಮಸೀದಿ ನಿರ್ಮಾಣವಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಅರ್ಥರ್ ಹುಸೇನ್ ಹೇಳಿದ್ದಾರೆ.
ಮಸೀದಿಯ ಜೊತೆಗೆ ಆಸ್ಪತ್ರೆಯನ್ನೂ ನಿರ್ಮಾಣ ಮಾಡಲಾಗುತ್ತಿದ್ದು, ಸಾಕಷ್ಟು ಮಂದಿ ಉತ್ತಮ ಚಿಕಿತ್ಸೆ ಪಡೆಯಬಹುದಾಗಿದೆ ಅರ್ಥರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ. ಸುಮಾರು 200 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದ್ದು, ಗ್ರಂಥಾಲಯವೂ ಇರಲಿದೆ.