ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಲ್ಲಿನ ತಿಹಾರ್ ಜೈಲಿನಲ್ಲಿ ಗುರುವಾರ ಪ್ರಜ್ಞೆ ತಪ್ಪಿ ಬಿದ್ದ ನಂತರ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪರಿಸ್ಥಿತಿ ಚಿಂತಾಜನಕವಾಗಿರುವುದರಿಂದ ಆಕ್ಸಿಜನ್ ಅವಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರನ್ನು ಕಳೆದ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಆದರೆ, ಜೈಲಿನ ಸ್ನಾನ ಗೃಹದಲ್ಲಿ ತಲೆ ತಿರುಗುವಿಕೆಯಿಂದ ಕುಸಿದು ಬಿದ್ದಿದ್ದಾರೆ. ಇದರಿಂದ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮೋದಿ ದುರಹಂಕಾರಿ ಎಂದ ಸಿಸೋಡಿಯಾ: ಮಾಜಿ ಡಿಸಿಎಂ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋದ್ರಾ ಪೊಲೀಸರು?
ಇದಕ್ಕೂ ಮೊದಲು ಸೋಮವಾರ ಸತ್ಯೇಂದ್ರ ಜೈನ್ ಸ್ನಾನಗೃಹದಲ್ಲಿ ಕುಸಿದು ಬಿದ್ದಿದ್ದರು. ಆಗ ಬೆನ್ನುಮೂಳೆಗೆ ಗಂಭೀರ ಗಾಯವಾಗಿತ್ತು. ನಂತರ ಜೈನ್ ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯಲ್ಲಿ ನಿದ್ರೆಯ ಸಮಯದಲ್ಲಿ ಆಗಾಗ್ಗೆ ಅವರಿಗೆ ಉಸಿರಾಟ ಕೂಡ ಉಂಟಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಬೆನ್ನುಮೂಳೆ ಸಂಬಂಧಿಸಿದ ಎರಡು ಆಪರೇಷನ್‌ಗಳಿಗೆ ಒಳಗಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹೇಳಿದೆ.
ಮೂಲಗಳ ಪ್ರಕಾರ, ಬೇಯಿಸಿದ ಆಹಾರವನ್ನು ಸತ್ಯೇಂದ್ರ ಜೈನ್ ತ್ಯಜಿಸಿದ್ದಾರೆ. ಕೇವಲ ಹಣ್ಣುಗಳು ಮತ್ತು ಹಸಿ ತರಕಾರಿಗಳ ಮೇಲೆ ಬದುಕುತ್ತಿದ್ದಾರೆ. ಇದರಿಂದ ತೀವ್ರ ಸ್ನಾಯುವಿನ ನಷ್ಟ ಅನುಭವಿಸಿದ್ದಾರೆ. ಇದಕ್ಕೆ ಕಾರಣ ಕಳೆದ ಒಂದು ವರ್ಷದಲ್ಲಿ ಸುಮಾರು ಜೈನ್ 35 ಕೆಜಿ ತೂಕ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೇಜ್ರಿವಾಲ್ ಸಂಪುಟಕ್ಕೆ ಡಿಸಿಎಂ ಸಿಸೋಡಿಯಾ, ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ
ಈ ಹಿಂದೆ ಜೈಲಿನಲ್ಲಿ ಸತ್ಯೇಂದ್ರ ಜೈನ್ ಮಸಾಜ್ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿ ಸಾಕಷ್ಟು ಸುದ್ದಿಯಾಗಿತ್ತು. ಆಗ ಬಿಜೆಪಿ ಜೈಲಿನಲ್ಲಿ ಆರೋಪಿಗೆ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂದು ಕಟು ಟೀಕೆ ಮಾಡಿತ್ತು. ಅಲ್ಲದೇ, ಮಾಸಾಶನ ಪಡೆದು ಜೈಲಿನಲ್ಲಿ ವಿವಿಐಪಿಯಂತೆ ಬದುಕುತ್ತಿದ್ದಾರೆ. ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿ ಕ್ರಿಮಿನಲ್‌ಗಳಿಗಾಗಿ ಮಸಾಜ್ ಪಾರ್ಲರ್ ತೆರೆದಿರುವಂತೆ ಕಾಣಿಸುತ್ತಿದೆ ಎಂದು ಬಿಜೆಪಿ ವಕ್ತಾರ ಶಹಜಾದ್ ಪೂನವಾಲಾ ವಾಗ್ದಾಳಿ ಮಾಡಿದ್ದರು. ಜೊತೆಗೆ ಜೈಲು ಅಧಿಕಾರಿಗಳ ಸಹಕಾರವಿಲ್ಲದೇ ಇದು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಜೈಲು ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ಆಗ್ರಹಿಸಿದ್ದರು.
9 ತಿಂಗಳ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ: ಸತ್ಯೇಂದ್ರ ಜೈನ್ ಜೈಲು ಸೇರಿದ 9 ತಿಂಗಳ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಕ್ರಮ ಹಣ ವರ್ಗಾವಣೆಗೆ ಬಳಸಲಾದ ನಾಲ್ಕು ಶೆಲ್ ಕಂಪನಿಗಳ ನಿಜವಾದ ನಿಯಂತ್ರಣವನ್ನು ಸತ್ಯೇಂದ್ರ ಜೈನ್ ಹೊಂದಿದ್ದಾರೆ ಎಂಬ ಇದೆ. ಕಳೆದ ಮಾರ್ಚ್ 31 ರಂದು ಜೈನ್ ಒಡೆತನದ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳಿಗೆ ಸೇರಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.
ಇದನ್ನೂ ಓದಿ: ಭರ್ಜರಿ ಆತಿಥ್ಯ.. ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ಗೆ ಮಸಾಜ್- ಸಿಸಿಟಿವಿ ವಿಡಿಯೋ