ಪ್ರಯಾಗರಾಜ್: ಏಪ್ರಿಲ್ 15 ರಂದು ಗ್ಯಾಂಗ್ಸ್ಟರ್ಗಳಾದ ಅತೀಕ್ ಮತ್ತು ಅಶ್ರಫ್ರನ್ನು ಮೂವರು ಶೂಟರ್ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯಾಕಾಂಡದ ನಂತರ, ಅತೀಕ್ ಅವರ ಚಾಕಿಯಾ ಕಚೇರಿ ಮತ್ತೊಮ್ಮೆ ತೀವ್ರ ಚರ್ಚೆಯಲ್ಲಿದೆ. ಈ ಧ್ವಂಸಗೊಂಡ ಕಚೇರಿಯ ಹಲವೆಡೆ ಸೋಮವಾರ ರಕ್ತದ ಕಲೆಗಳು ಕಂಡುಬಂದಿವೆ. ಚೂರಿಗಳು ಮತ್ತು ರಕ್ತಸಿಕ್ತ ಬಟ್ಟೆಗಳು ಪತ್ತೆಯಾಗಿವೆ. ಕೆಲವು ಮುರಿದ ಬಳೆಗಳೂ ಬಿದ್ದಿರುವುದು ಸಹ ಪತ್ತೆಯಾಗಿವೆ.
ಈ ಬಗ್ಗೆ ಮಾಹಿತಿ ಪಡೆದು ಧುಮ್‌ಗಂಜ್ ಮತ್ತು ಖುಲ್ದಾಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತಪಾಸಣೆ ಕೈಗೊಂಡರು. ವಿಧಿವಿಜ್ಞಾನ ತಂಡವನ್ನೂ ಸ್ಥಳಕ್ಕೆ ಕರೆಸಲಾಗಿತ್ತು. ನಗರ ಎಸಿಪಿ ಹಾಗೂ ಡಿಸಿಪಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೂ ಫೊರೆನ್ಸಿಕ್ ವರದಿ ಬರಬೇಕಿದೆ. ಈ ವರದಿಯಿಂದ ಯಾರ ರಕ್ತದ ಕುರುಹು ಇದೆ ಎಂಬುದು ಗೊತ್ತಾಗಲಿದೆ. ಅತೀಕ್ ಅಹಮದ್ ಅವರ ಕಚೇರಿಯಲ್ಲಿ ನೆಲಮಹಡಿಯಿಂದ ಮೊದಲ ಮಹಡಿಯವರೆಗೆ ಎಲ್ಲೆಂದರಲ್ಲಿ ರಕ್ತದ ಕುರುಹುಗಳು ಕಂಡು ಬಂದಿವೆ. ಅನೇಕ ಬಟ್ಟೆಗಳ ಮೇಲೂ ರಕ್ತದ ಕಲೆ ಇರುವುದು ಗೊತ್ತಾಗಿದೆ.
ಈ ಬಗ್ಗೆ ಜನರು ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಚಕಿಯಾದಲ್ಲಿರುವ ಅತೀಕ್ ಅಹ್ಮದ್ ಅವರ ಕಚೇರಿಯ ಪ್ರವೇಶದ್ವಾರದ ಬಳಿ ರಕ್ತದ ಕಲೆ ಇರುವ ಚಾಕು ಬಿದ್ದಿತ್ತು. ಅಷ್ಟೇ ಅಲ್ಲ ಅಲ್ಲಿನ ನೆಲದ ಮೇಲೂ ರಕ್ತವಿತ್ತು, ಗೋಡೆಯ ಮೇಲೂ ರಕ್ತದ ಕಲೆ ಅಂಟಿಕೊಂಡಿತ್ತು. ಯಾರೋ ಕೈಯಲ್ಲಿದ್ದ ರಕ್ತವನ್ನು ಒರೆಸಲು ಯತ್ನಿಸಿದಂತಿತ್ತು. ಮೊದಲ ಮಹಡಿಯಲ್ಲಿ ಹಲವೆಡೆ ರಕ್ತದ ಕಲೆಗಳು ಪತ್ತೆಯಾಗಿವೆ. ಕೋಣೆಯಲ್ಲಿ ಬಿದ್ದಿದ್ದ ದುಪಟ್ಟಾದಲ್ಲಿ ರಕ್ತದ ಕಲೆ ಇರುವುದು ಗೊತ್ತಾಗಿದೆ. ಇದರೊಂದಿಗೆ ಸ್ಥಳದಲ್ಲಿ ಹಳೆಯ ಫ್ರಾಕ್ ಕೂಡ ಬಿದ್ದಿದ್ದು, ಅದರ ಮೇಲೂ ರಕ್ತ ಅಂಟಿಕೊಂಡಿತ್ತು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಕಚೇರಿ ಪ್ರವೇಶಿಸಿರುವ ಸಾಧ್ಯತೆ: ಈ ಕಚೇರಿ ಕೊಠಡಿಯೊಂದರ ಕಿಟಕಿಯ ಗಾಜು ಒಡೆದಿತ್ತು. ರಕ್ತದ ಕುರುಹುಗಳೂ ಇಲ್ಲಿ ಕಂಡು ಬಂದಿವೆ. ಅತೀಕ್ ಅಹಮದ್ ಕಚೇರಿಗೆ ಯಾರೋ ಕದಿಯುವ ಉದ್ದೇಶದಿಂದ ಪ್ರವೇಶಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಲೆಬಾಳುವ ವಸ್ತುಗಳು.. ಕಪಾಟುಗಳ ಒಳಗೆ ಇಟ್ಟಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಹೀಗಾಗಿ ಪೊಲೀಸರು ಇದು ಕಳ್ಳತನ ಯತ್ನವಾ ಅಥವಾ ಇನ್ನೇನೋ ಇರಬಹುದು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.
ಅಡುಗೆ ತಯಾರಿಸಿದ ಶಂಕೆ: ಅತೀಕ್ ಅಹಮದ್ ಕಚೇರಿಯನ್ನು ಜೆಸಿಬಿಯಿಂದ ಕೆಡವಲಾಗಿದೆ. ಕಚೇರಿಯ ಮುಂಭಾಗದಿಂದ ಸಂಪೂರ್ಣವಾಗಿ ಧ್ವಂಸಗೊಳಿಸಿಲಾಗಿದೆ, ಹಿಂಭಾಗದ ಕೆಲವು ಭಾಗಕ್ಕೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಇಲ್ಲಿ ನಿರ್ವಸತಿಗರು ಬೀಡುಬಿಟ್ಟು ಅಡುಗೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರಕ್ತದ ಮಾದರಿಗಳನ್ನು ರವಾನಿಸಿದ್ದಾರೆ. ಹೀಗಾಗಿ ಈ ವರದಿ ಬಂದ ನಂತರವೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.