ಕಥುವಾ (ಜಮ್ಮು ಮತ್ತು ಕಾಶ್ಮೀರ) : ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬುಧವಾರ ಎರಡು ಮನೆಗಳು ಕುಸಿದು ಐವರು ಸಾವನ್ನಪ್ಪಿರುವ ಘಟನೆ ಕಥುವಾ ಜಿಲ್ಲೆಯ ಬನಿ ಪ್ರದೇಶದಲ್ಲಿ ನಡೆದಿದೆ. ಸುರ್ಜನ್ ಮೋರ್ಹಾ ಅರುದ್ ಬ್ಲಾಕ್‌ನ ನಿವಾಸಿಗಳಾದ ಮುಷ್ತಾಕ್ ಅಹ್ಮದ್ ಮತ್ತು ಅಬ್ದುಲ್ ಕಯೂಮ್ ಎಂಬುವರಿಗೆ ಸೇರಿದ ಎರಡು ಮನೆಗಳು ಕುಸಿದು ಭಾರಿ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಕುಸಿಯುವ ಸಂದರ್ಭದಲ್ಲಿ ಅದರೊಳಗಿದ್ದ ಮಕ್ಕಳು ಸೇರಿ ಐವರು ಅವಶೇಷಗಳಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇನ್ನು, ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮೃತರ ಕುಟುಂಬದವರಿಗೆ 50 ಸಾವಿರ ರೂ. ಹಾಗೂ ಗಾಯಗೊಂಡವರಿಗೆ 25 ಸಾವಿರ ಪರಿಹಾರ ಘೋಷಿಸಿದ್ದಾರೆ.
ವಿವಿಧೆಡೆ ಸಂಚಾರ ಬಂದ್ : ತಾವಿ, ಚೆನಾಬ್, ಬಸಂತರ್, ದೇವಕ್ ಮತ್ತು ಉಜ್ಹ್ ಸೇರಿದಂತೆ ಎಲ್ಲಾ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಜಮ್ಮುವಿನ ವಿವಿಧ ಭಾಗಗಳಲ್ಲಿ ರಸ್ತೆಗಳು ಹಾನಿಗೊಳಾಗಿದ್ದು, ಸಂಚಾರ ಬಂದ್ ಮಾಡಲಾಗಿದೆ. ಪ್ರವಾಹ ಮತ್ತು ಭೂ ಕುಸಿತದ ವರದಿಗಳು ಬಂದಿರುವುದರಿಂದ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಬಾನಿ ಸತೀಶ್ ಕುಮಾರ್ ಹೇಳಿದ್ದಾರೆ.
ವೈಷ್ಣೋದೇವಿ ಯಾತ್ರೆ ಮತ್ತು ಅಮರನಾಥ ಯಾತ್ರ ಸ್ಥಗಿತ : ಹವಾಮಾನ ವೈಪರೀತ್ಯದಿಂದಾಗಿ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೊಸ ಮಾರ್ಗವನ್ನು ಮುಚ್ಚಲಾಗಿದ್ದು, ರಿಯಾಸಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. ಆದರೆ ಕಥುವಾ, ದೋಡಾ, ರಜೌರಿ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಪ್ರವಾಹದ ಭೀತಿಯಲ್ಲಿರುವ ಎಲ್ಲಾ ಶಾಲೆಗಳನ್ನು ಮುಚ್ಚಲು ಅಧಿಕಾರಿಗಳು ಆದೇಶಿಸಿದ್ದಾರೆ.
ರಾಂಬನ್‌ನ ಯಾತ್ರಿ ನಿವಾಸ್ ಚಂದರ್‌ಕೋಟೆಯಲ್ಲಿ ಭೂಕುಸಿತದಿಂದಾಗಿ ಕಾಶ್ಮೀರದ ಅಮರನಾಥ ದೇಗುಲಕ್ಕೆ ತೆರಳಿದ್ದ 4,900 ಯಾತ್ರಾರ್ಥಿಗಳ ಹೊಸ ಬ್ಯಾಚ್ ಅನ್ನು ಮುಂದೆ ಹೋಗದಂತೆ ತಡೆದಿದ್ದು, ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ತರ್ನಾಹ್ ನುಲ್ಲಾದಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಥುವಾದಲ್ಲಿನ ಜಮ್ಮು-ಪಠಾಣ್‌ಕೋಟ್ ರಸ್ತೆಯನ್ನು ಸಹ ಮುಚ್ಚಲಾಗಿದೆ. ಮತ್ತೊಂದೆಡೆ ವರುಣನ ಆರ್ಭಟಕ್ಕೆ ತರ್ನಾಹ್ ಬಳಿ ಸೇತುವೆ ಹಾನಿಗೊಳಗಾಗಿದೆ.
ಉಧಮ್‌ಪುರ-ಕಥುವಾ ಕ್ಷೇತ್ರದ ಸಂಸದ ಡಾ. ಜಿತೇಂದ್ರ ಸಿಂಗ್ ಅವರು, ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಹಠಾತ್ ಪ್ರವಾಹದಿಂದಾಗಿ ಕಥುವಾದಲ್ಲಿನ ಚಡ್ವಾಲ್ ಸೇತುವೆಗೆ ಹಾನಿಯಾಗಿದ್ದು, ಸಂಚಾರಕ್ಕೆ ಅನಾನುಕೂಲತೆ ಉಂಟಾಗಿರುವ ಬಗ್ಗೆ ತಿಳಿಯಲು ಕಳವಳಗೊಂಡಿದ್ದೇನೆ. ನಾನು ತಕ್ಷಣ ಕಥುವಾ ಡಿಸಿ ರಾಕೇಶ್ ಮಿನ್ಹಾಸ್ ಮತ್ತು ಎನ್‌ಎಚ್‌ಎಐ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ತ್ವರಿತ ದುರಸ್ತಿ ಮತ್ತು ಪರಿಹಾರಕ್ಕಾಗಿ ನನ್ನ ಅಧಿಕಾರಿಗಳು ಈ ವಿಷಯದ ನಿರಂತರವಾಗಿ ಮಾಹಿತಿ ನೀಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಗುಡ್ಡ ಕುಸಿತ : ಮಳೆಯಿಂದಾಗಿ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿದೆ. ರಾಂಬನ್ ಜಿಲ್ಲೆಯ ಬನ್ಹಾಲ್, ಕೆಫೆಟೇರಿಯಾ ಮೋರ್ ಮತ್ತು ಮಾರೋಗ್‌ನಲ್ಲಿ ಮಣ್ಣು ಮತ್ತು ಕಲ್ಲುಗಳು ಬೀಳುತ್ತಿರುವ ಕಾರಣ ಶ್ರೀನಗರ-ಜಮ್ಮು ಹೆದ್ದಾರಿಯನ್ನು ಮುಚ್ಚಲಾಗಿದೆ. ಭಗವತಿ ನಗರ ಮೂಲ ಶಿಬಿರದಿಂದ 6,000 ಕ್ಕೂ ಹೆಚ್ಚು ಯಾತ್ರಾರ್ಥಿಗಳ ಮತ್ತೊಂದು ಬೆಂಗಾವಲು ಕಾಶ್ಮೀರಕ್ಕೆ ಕಳುಹಿಸಲಾಯಿತು. ಆದರೆ ಯಾತ್ರಿಕರನ್ನು ಜಿಲ್ಲೆಯ ರಾಮ್ ಬಿನ್ ಚಂದ್ರ ಕೋರ್ಟ್ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಯಾತ್ರಿ ನಿವಾಸದಲ್ಲಿ ನಿಲ್ಲಿಸಲಾಗಿದೆ.
ರಾಂಬಿನ್ಸ್ ಕೆಫೆಟೇರಿಯಾ ತಿರುವಿನಲ್ಲಿ ಭೂಕುಸಿತ ಉಂಟಾಗಿದ್ದರಿಂದ ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶ್ರೀನಗರ-ಜಮ್ಮು ಹೆದ್ದಾರಿ ಸಂಚಾರವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಜಿಲ್ಲೆಯ ಮರೋಗ್ ಮತ್ತು ಪಂಥಾಲ್ ಪ್ರದೇಶದಲ್ಲೂ ಕಲ್ಲು, ಮಣ್ಣು ಕುಸಿದು ಬಿದ್ದಿದ್ದು, ಹೆದ್ದಾರಿಯಲ್ಲಿ ದಟ್ಟಣೆ ಉಂಟಾಗಿರುವುದರಿಂದ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಉತ್ತರಾಖಂಡದಲ್ಲಿ ಗುಡ್ಡ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..