ಶ್ರೀನಗರ (ಜಮ್ಮು-ಕಾಶ್ಮೀರ): ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಗಂಭೀರ ಆರೋಪದಡಿ ಜಮ್ಮು-ಕಾಶ್ಮೀರದ ಐವರು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇವರಲ್ಲಿ ಮೂವರು ಪೊಲೀಸರು, ಒಬ್ಬ ಶಿಕ್ಷಕ ಕೂಡ ಸೇರಿದ್ದಾರೆ ಅನ್ನೋದು ಗಮನಾರ್ಹ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ತೌಸೀಫ್ ಅಹ್ಮದ್ ಮಿರ್, ಶಿಕ್ಷಕ ಅರ್ಷಿದ್ ಅಹ್ಮದ್, ವಿಶೇಷ ಪೊಲೀಸ್ ಅಧಿಕಾರಿಗಳಾದ ಶರಾಫತ್ ಅಲಿ ಖಾನ್, ಶಾಹಿದ್ ಹುಸೇನ್ ಹಾಗೂ ಮತ್ತೊಬ್ಬ ಸರ್ಕಾರಿ ನೌಕರ ಗುಲಾಂ ಹಸನ್ ಎಂಬುವವರೇ ಉಗ್ರರೊಂದಿಗೆ ಸಂಪರ್ಕ ಹೊಂದಿದವರು ಎಂದು ಗುರುತಿಸಲಾಗಿದೆ. ಈ ಐವರ ಹಿನ್ನೆಲೆ ಹೀಗಿದೆ..
ತೌಸೀಫ್ ಅಹ್ಮದ್ ಮಿರ್: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ ತೌಸೀಫ್ ಅಹ್ಮದ್ ಮಿರ್ ಸಕ್ರಿಯವಾಗಿ ನಂಟು ಹೊಂದಿದ್ದ. ಈ ಹಿಂದೆ ತನ್ನ ಪೊಲೀಸ್ ಸಹೋದ್ಯೋಗಿಗಳ ಹತ್ಯೆಗೂ ಇವನು ಯತ್ನಿಸಿದ್ದ. ಈತನ ತಂದೆ ಕೂಡ ಓರ್ವ ಉಗ್ರನಾಗಿದ್ದ. ಆತ 1997ರಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ತೌಸೀಫ್ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಮೇಲೂ ಉಗ್ರರ ನಂಟು ಬಿಟ್ಟಿರಲಿಲ್ಲ.
ಗುಲಾಂ ಹಸನ್: ಈತ ಸೈದಯ್ ಅಲಿ ಶಾ ಗಿಲಾನಿ ಕೃಪೆಯಿಂದ ಸರ್ಕಾರಿ ನೌಕರಿಗೆ ಸೇರಿದ್ದ. ಈತ ಹಿಂಸಾತ್ಮಕ ಪ್ರತಿಭಟನೆಗಳಿಗೆ ಪ್ರಚೋದನೆ ಕೊಡುತ್ತಿದ್ದ. ಅಲ್ಲದೇ, ಉಗ್ರರ ಸಂಘಟನೆ ಸೇರಲು ಯುವಕರಿಗೆ ಪ್ರೋತ್ಸಾಹಿಸುತ್ತಿದ್ದ. ಈ ಹಿಂದೆ ಮುಗೀಸ್ ಅಹ್ಮದ್ ಎಂಬ ಯುವಕನನ್ನು ಉಗ್ರ ಸಂಘಟನೆಗೆ ಸೇರಿಸಿದ್ದಾನೆ. ನಂತರದಲ್ಲಿ ಮುಗೀಸ್ ಎನ್ಕೌಂಟರ್ನಲ್ಲಿ ಹತನಾಗಿದ್ದ.
ಅರ್ಷಿದ್ ಅಹ್ಮದ್: ಈತ ಓರ್ವ ಶಿಕ್ಷಕನಾಗಿದ್ದರೂ ಕೂಡ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ. ಶಿಕ್ಷಕನ ವೇಷದಲ್ಲೇ ಇದ್ದುಕೊಂಡು ಹಿಂಸಾತ್ಮಕ ಘಟನೆಗಳಿಗೆ ಪ್ರಚೋದಿಸುತ್ತಿದ್ದ. ಅವಂತಿಪೋರ್ನಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಕಲ್ಲು ತೂರಾಟಕ್ಕೂ ಇವನು ಕಾರಣವಾಗಿದ್ದ. ಉಗ್ರರ ಸಂಘಟನೆಗಳಿಗೆ ಹಣ ಸಂಗ್ರಹದಲ್ಲೂ ಅರ್ಷಿದ್ ಅಹ್ಮದ್ ತೊಡಗಿಸಿಕೊಂಡಿದ್ದ.
ಶಾಹಿದ್ ಹುಸೇನ್: ವಿಶೇಷ ಪೊಲೀಸ್ ಅಧಿಕಾರಿಯಾಗಿ ಶಾಹಿದ್ ಹುಸೇನ್ 2005ರಲ್ಲಿ ನೇಮಕವಾಗಿದ್ದ. ನಂತರ 2009ರಲ್ಲಿ ಉಗ್ರರ ಸಂಪರ್ಕ ಬೆಳೆಸಿಕೊಂಡಿದ್ದ. ಬಳಿಕ ಇವನು ನಿರ್ಲಿಪ್ತನಾಗಿದ್ದರೂ, 2011ರಲ್ಲಿ ಮತ್ತೆ ವಿಶೇಷ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದ. ಅಲ್ಲಿಂದ 2013ರಲ್ಲಿ ಈತನಿಗೆ ಕಾನ್ಸ್ಟೇಬಲ್ ಆಗಿ ಬಡ್ತಿ ನೀಡಲಾಗಿತ್ತು. ಇದನ್ನೇ ಬಳಸಿಕೊಂಡು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ. 2021ರಲ್ಲಿ ಈತನ ಬಳಿ ಚೀನಾದ ಪಿಸ್ತೂಲ್ ಮತ್ತು ಡ್ರಗ್ ಪತ್ತೆಯಾದ ನಂತರ ಬಂಧಿಸಲಾಗಿದೆ.
ಶರಾಫತ್ ಅಲಿ ಖಾನ್: ಈತ ಕೂಡ ವಿಶೇಷ ಪೊಲೀಸ್ ಅಧಿಕಾರಿಯಾಗಿ 1998ರಲ್ಲೇ ಆಯ್ಕೆಯಾಗಿದ್ದ. ನಂತರದಲ್ಲಿ ಆರೋಗ್ಯ ಇಲಾಖೆಯನ್ನು ಸೇರಿಕೊಂಡಿದ್ದ. ಆದರೆ, ಆರೋಗ್ಯ ಇಲಾಖೆಗೆ ನೇಮಕವಾಗಿದ್ದು ಹೇಗೆ ಎಂಬ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಅನೇಕ ಉಗ್ರ ಸಂಘಟನೆಗಳೊಂದಿಗೂ ನಂಟು ಹೊಂದಿದ್ದ ಇವನು ನಕಲಿ ನೋಟುಗಳನ್ನು ಚಲಾವಣೆಯಲ್ಲೂ ತೊಡಗಿಸಿಕೊಂಡಿದ್ದ. ಈ ನಕಲಿ ನೋಟುಗಳ ಚಲಾವಣೆ ಪ್ರಕರಣದಲ್ಲೇ ಬಂಧಿಸಲಾಗಿದೆ.
ಇದನ್ನೂ ಓದಿ: ಸಿನಿಮಾ ನಿರ್ದೇಶಕನಿಂದ ನಿರಂತರ ಅತ್ಯಾಚಾರ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ