ಲಖೀಂಪುರ ಖೇರಿ(ಉತ್ತರ ಪ್ರದೇಶ): ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಡುಗೆ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಲಖೀಂಪುರ ಜಿಲ್ಲೆಯಲ್ಲಿ ನಡೆದಿದೆ. ಲಖೀಂಪುರದ ಸಹದೇವ ಪ್ರಾಥಮಿಕ ಶಾಲೆಯ ಅಡುಗೆ ಕೊಠಡಿಯಲ್ಲಿ ಅಗ್ನಿ ಅವಘಡ ನಡೆದಿದ್ದು, ಅಡುಗೆ ಸಿಬ್ಬಂದಿಯಾಗಿದ್ದ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಶಹಜಹಾನ್‌ಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸಿಲಿಂಡರ್ ಮತ್ತು ಗ್ಯಾಸ್ ಸ್ಟೌ ಸ್ವಚ್ಛಗೊಳಿಸುವಾಗ ಹಠಾತ್ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ. ವೈದ್ಯರ ಪ್ರಕಾರ ಮೃತಪಟ್ಟ ಅಡುಗೆ ಸಿಬ್ಬಂದಿಗೆ ಶೇಕಡಾ 90ರಷ್ಟು ಸುಟ್ಟ ಗಾಯಗಳಾಗಿತ್ತು. ಮಾರ್ಗಮಧ್ಯೆಯೇ ಮಹಿಳೆ ಸಾವನ್ನಪ್ಪಿದ್ದಾರೆ. ಅನಿತಾದೇವಿ ಮೃತಪಟ್ಟ ಅಡುಗೆ ಸಿಬ್ಬಂದಿಯಾಗಿದ್ದು, ಶಾಲೆಯ ಅಡುಗೆ ಕೊಠಡಿಯಲ್ಲಿದ್ದ ಸಿಲಿಂಡರ್ನಲ್ಲಿ ಸ್ಟೌ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗ್ತಿದೆ.
ಇಂದು ಅನಿತಾ ದೇವಿ ಸಿಲಿಂಡರ್ ಕ್ಲೀನ್ ಮಾಡಲು ಆರಂಭಿಸಿದ್ದಾರೆ. ನಂತರ ಸಹಾಯಕ್ಕಾಗಿ ಆದೇ ಶಾಲೆಯಲ್ಲಿ ಓದುತ್ತಿದ್ದ 14 ವರ್ಷದ ಅಕ್ರಂ ಎಂಬಾತನನ್ನು ಸಹಾಯಕ್ಕೆ ಕರೆದಿದ್ದಾಳೆ. ಈ ವೇಳೆ ಗ್ಯಾಸ್ಸ್ಟೌ ಅನ್ನು ಸ್ವಚ್ಛಗೊಳಿಸುವ ವೇಳೆ ಗ್ಯಾಸ್ ಸೋರಿಕೆಯಿಂದ ಸಿಲಿಂಡರ್ಗೆ ಬೆಂಕಿ ಹೊತ್ತಿಕೊಂಡಿದೆ. ತೀವ್ರವಾಗಿ ಬೆಂಕಿ ಹರಡಿದ್ದರಿಂದ ಶಾಲೆಯಲ್ಲಿ ಅಸ್ತವ್ಯಸ್ತವಾಗಿದೆ.
ಶಾಲಾ ಸಿಬ್ಬಂದಿ ಸಿಲಿಂಡರ್ ಅನ್ನು ಅಡುಗೆ ಮನೆಯಿಂದ ಹೊರಗೆ ಎಸೆದರೂ, ಬೆಂಕಿಗೆ ಸಿಲುಕಿದ್ದ ಅನಿತಾದೇವಿ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ಮಾರ್ಗಮಧ್ಯೆ ಅನಿತಾ ದೇವಿ ಮೃತಪಟ್ಟಿದ್ದಾರೆ. ವಿದ್ಯಾರ್ಥಿ ಅಕ್ರಂಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಮ ದೇಗುಲದ ಹೊರಗೆ ಅನ್ಯ ಕೋಮಿನವರಿಂದ ಪ್ರಾರ್ಥನೆ.. ಎರಡು ಗುಂಪುಗಳ ನಡುವೆ ಘರ್ಷಣೆ