ಫಿರೋಜಾಬಾದ್(ಉತ್ತರ ಪ್ರದೇಶ): ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಫಿರೋಜಾಬಾದ್‌ನ ಜಸ್ರಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಧಮ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ರಮಣ್ ಪ್ರಕಾಶ್ ಎಂಬವರು ಜಸ್ರಾನದ ಪಾಧಮ್ ಗ್ರಾಮದಲ್ಲಿ ಪೀಠೋಪಕರಣದ ಶೋರೂಂ ಹೊಂದಿದ್ದಾರೆ. ಈ ಶೋರೂಂನ ಮೇಲ್ಭಾಗದಲ್ಲಿ ಇವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಇವರ ಅಂಗಡಿಯಲ್ಲಿ ಮಂಗಳವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಫಿರೋಜಾಬಾದ್ ಮತ್ತು ಆಗ್ರಾ ಮತ್ತು ಮೈನ್‌ಪುರಿಯಿಂದ ಒಟ್ಟು 18 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಅಗ್ನಿಯ ರುದ್ರ ನರ್ತನದಿಂದಾಗಿ 9 ಮಂದಿ ಮನೆಯೊಳಗೆ ಸಿಲುಕಿಕೊಂಡಿದ್ದರು. ಮೂರು ಗಂಟೆಗಳ ಪರಿಶ್ರಮದ ನಂತರ ಬೆಂಕಿ ಹತೋಟಿಗೆ ತರಲಾಯಿತು. ಅಲ್ಲಿಯವರೆಗೆ ಮನೆಯಲ್ಲಿ ಸಿಲುಕಿದ್ದ 6 ಮಂದಿ ಸಜೀವ ದಹನವಾಗಿದ್ದರು. ಮೃತರಲ್ಲಿ ಮೂವರು ಮಕ್ಕಳಿದ್ದಾರೆ. ಮತ್ತೆ ಮೂವರನ್ನು ರಕ್ಷಿಸಲಾಗಿದೆ.
ರಮಣ್ ಪ್ರಕಾಶ್ ಅವರ ಮಗ ಮನೋಜ್ ಕುಮಾರ್, ಮನೋಜ್ ಕುಮಾರ್ ಅವರ ಪತ್ನಿ ನೀರಜಾ, ಮಕ್ಕಳಾದ ಹರ್ಷ್ ಮತ್ತು ಭರತ್ ಮೃತಪಟ್ಟವರೆಂದು ತಿಳಿದುಬಂದಿದೆ. ಇವರ ಕುಟುಂಬಸ್ಥರಾದ ನಿತಿನ್ ಅವರ ಪತ್ನಿ ಶಿವಾಮಿ ಮತ್ತು ಮಗಳು ತೇಜಸ್ವಿ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವಿರಂಜನ್ ಮತ್ತು ಎಸ್‌ಎಸ್‌ಪಿ ಆಶಿಶ್ ತಿವಾರಿ ತಿಳಿಸಿದ್ದಾರೆ. ಘಟನೆಗೆ ಸಂತಾಪ ಸೂಚಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಸರಣಿ ಅಪಘಾತ: ಓರ್ವ ಸಾವು, 9 ಮಂದಿಗೆ ಗಾಯ