ಕರ್ನಾಲ್( ಹರಿಯಾಣ): ಇಲ್ಲಿನ ಕೈಮಲಾ ಗ್ರಾಮದಲ್ಲಿ ಭಾನುವಾರ ಕಿಸಾನ್ ಮಹಾಪಂಚಾಯತ್‌ನಲ್ಲಿ ನಡೆದ ಗಲಾಟೆ, ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದಂತೆ ಭಾರತೀಯ ರೈತ ಒಕ್ಕೂಟದ 71 ಜನರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮವು ಕೈಮ್ಲಾದಲ್ಲಿ ಭಾನುವಾರ ಉತ್ತಮವಾಗಿ ನಡೆಯುತ್ತಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಕೆಲವರು ಕೋಲುಗಳಿಂದ ಕಾರ್ಯಕ್ರಮಕ್ಕೆ ಬಂದು ಗಲಾಟೆ ನಡೆಸಿದ್ದಾರೆ. ಸರ್ಕಾರಿ ಆಸ್ತಿಯನ್ನು ಧ್ವಂಸ ಮಾಡಲು ಮತ್ತು ಕಾರ್ಯಕ್ರಮದಲ್ಲಿದ್ದವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಹೀಗಾಗಿ ಭಕ್ಯು ಅಧ್ಯಕ್ಷ ಗುರ್ನಮ್ ಸಿಂಗ್ ಚಾಡುನಿ ಸೇರಿದಂತೆ 71 ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗಂಗಾರಂ ಪೂನಿಯಾ ತಿಳಿಸಿದ್ದಾರೆ.
ಓದಿ: ವಿಡಿಯೋ: ಹರಿಯಾಣದಲ್ಲಿ ತೀವ್ರಗೊಂಡ ರೈತರ ಹೋರಾಟ, ಗ್ರಾಮಸ್ಥರು-ರೈತರ ಮುಖಾಮುಖಿ
ಕೈಮಲಾ ಗ್ರಾಮದಲ್ಲಿ ಏನಾಯಿತು?
ಭಾನುವಾರ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕರ್ನಾಲ್ ಕೈಮಲಾ ಗ್ರಾಮದಲ್ಲಿ ಕಿಸಾನ್ ಮಹಾಪಂಚಾಯತ್ ಎಂಬ ಕಾರ್ಯಕ್ರಮದ ಮೂಲಕ ಕೇಂದ್ರದ ಮೂರು ಕೃಷಿ ಕಾನೂನುಗಳ ಪ್ರಯೋಜನಗಳನ್ನು ಜನರಿಗೆ ತಿಳಿಸಬೇಕಿತ್ತು. ಆದರೆ, ಭಾರತೀಯ ರೈತ ಒಕ್ಕೂಟದ ಪ್ರತಿಭಟನಾ ನಿರತ ರೈತರು 'ಕಿಸಾನ್ ಮಹಾಪಂಚಾಯತ್' ಸ್ಥಳವನ್ನು ಧ್ವಂಸಗೊಳಿಸಿದರು.
ಕರ್ನಾಲ್ ಜಿಲ್ಲೆಯ ಕೈಮಲಾ ಗ್ರಾಮದ ಕಡೆಗೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಹರಿಯಾಣ ಪೊಲೀಸರು ಭಾನುವಾರ ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದರು. ಆದರೂ ಸಹ ಪ್ರತಿಭಟನಾಕಾರರು 'ಕಿಸಾನ್ ಮಹಾ ಪಂಚಾಯತ್' ಕಾರ್ಯಕ್ರಮದ ಸ್ಥಳಕ್ಕೆ ತಲುಪಿ ಅಡ್ಡಿಪಡಿಸಿದರು. ಈ ಘಟನೆ ಹಿನ್ನೆಲೆ ಭಕ್ಯು ಅಧ್ಯಕ್ಷ ಗುರ್ನಮ್ ಸಿಂಗ್ ಚಡುನಿ ಸೇರಿದಂತೆ 71 ರೈತರ ಮೇಲೆ ಪ್ರಕರಣ ದಾಖಲಾಗಿದೆ.