ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಕೇಂದ್ರ ಬಜೆಟ್ ಕುರಿತಾದ ಆರೋಪಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿದರು.
ಅಧಿವೇಶನದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆರೋಪಗಳನ್ನು ಮಾಡುವುದು ಪ್ರತಿಪಕ್ಷಗಳಿಗೆ ಒಂದು ರೀತಿಯ ಅಭ್ಯಾಸವಾಗಿ ಮಾರ್ಪಟ್ಟಿದೆ. ಈ ದೇಶದ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಪ್ರತಿಪಕ್ಷಗಳು ಈ ಕುರಿತು ಸುಳ್ಳು ಮಾಹಿತಿ ಹರಡುತ್ತಿವೆ ಎಂದು ಹಣಕಾಸು ಸಚಿವೆ ತಿರುಗೇಟು ನೀಡಿದರು.
ಮಿಲಿಟರಿ ಮತ್ತು ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ನಿಯೋಜಿಸಲಾಗಿರುವ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ದೇಶದ ಪ್ರಮುಖ ಬಂದರುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 'ಬಂದರು ಪ್ರಾಧಿಕಾರ ಮಸೂದೆ 2020 ಅನ್ನು ಫೆಬ್ರವರಿ 10 ರಂದು ಸದನದಲ್ಲಿ ಅಂಗೀಕರಿಸಲಾಯಿತು. 84 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 44 ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದ್ದರು. ಜೊತೆಗೆ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ತಿದ್ದುಪಡಿ 2021 ಸಹ ಫೆಬ್ರವರಿ 8 ರಂದು ಸಂಸತ್ನಲ್ಲಿ ಅಂಗೀಕರಿಸಲ್ಪಟ್ಟಿದೆ.
ಬಜೆಟ್ ಕುರಿತಾದದ ಚರ್ಚೆ ಮತ್ತು ಉತ್ತರ ನೀಡುವ ಪ್ರಕ್ರಿಯೆಯನ್ನು ಇಂದು ಪೂರ್ಣಗೊಳಿಸಲಾಗುವುದು. ಈ ಮೂಲಕ ಬಜೆಟ್ ಅಧಿವೇಶನದ ಮೊದಲ ಭಾಗವನ್ನು ಇಂದು ಕೊನೆಗೊಳಿಸಲಾಗುತ್ತಿದೆ. ಸಂಸತ್ತಿನ ಎರಡು ಸದನಗಳ ಜಂಟಿ ಸಭೆಗೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಜನವರಿ 29 ರಂದು ಬಜೆಟ್ ಅಧಿವೇಶನ ಪ್ರಾರಂಭಿಸಲಾಗಿತ್ತು.