ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನ ಪಬ್ವೊಂದರಲ್ಲಿ ಎರಡು ಗಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಈ ವೇಳೆ ಎದುರಾಳಿ ಯುವಕರು ಫೋನ್ ನಂಬರ್ ಕೊಡದ ಯುವತಿಗೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಜೂನ್ 18ರಂದು ವಿಶ್ವಸಂಸ್ಥೆಯ ಮಂಡಳಿವೊಂದಲ್ಲಿ ಉದ್ಯೋಗಿಯಾದ ಮಹಿಳೆಯೊಬ್ಬರು ತನ್ನ ಸ್ನೇಹಿತರಾದ ಬಾಕ್ಸರ್ ವಿಕ್ರಂ ಮತ್ತು ವಿಷ್ಣು ಎಂಬುವವರೊಂದಿಗೆ ಹೈಟೆಕ್ ಸಿಟಿಯ ಫೈವ್ ಸ್ಟಾರ್ನಲ್ಲಿರುವ ಪಬ್ಗೆ ಹೋಗಿದ್ದರು. ಈ ವೇಳೆ ಎದುರಾಳಿ ಗುಂಪಿನ ಮಯಾಂಕ್ ಅಗರ್ವಾಲ್, ಅಬ್ರರ್, ಆರಿಫುದ್ದೀನ್ ಹಾಗೂ ಖಾದರ್ ಸೇರಿ ಎಂಟು ಜನರು ಪಬ್ಗೆ ಬಂದಿದ್ದರು.
ಎಂಟು ಜನರ ಗಂಪಿನಲ್ಲಿದ್ದ ಯುವಕನೋರ್ವ ನನ್ನ ಬಳಿ ಬಂದು ಮೊಬೈಲ್ ನಂಬರ್ ಕೇಳಿದ. ನಾನು ನಂಬರ್ ಕೊಡಲು ಒಪ್ಪದೇ ಇದ್ದಾಗ ಆತ ಅತ್ಯಾಚಾರ ಬೆದರಿಕೆ ಹಾಕಿದ. ಆಗ ನನ್ನ ಜೊತೆಗಿದ್ದ ಒಬ್ಬ ಸ್ನೇಹಿತ ಮಧ್ಯಪ್ರವೇಶಿಸಿದ. ಇದು ಎರಡೂ ಗುಂಪುಗಳ ಗಲಾಟೆಗೆ ಕಾರಣವಾಗಿ, ನನ್ನ ಸ್ನೇಹಿತರ ಮೇಲೆ ಬಾಟಲ್ಗಳಿಂದಲೂ ದಾಳಿ ಮಾಡಲಾಗಿದೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತ, ಈ ದೂರಿಗೆ ಪ್ರತಿಯಾಗಿ ಎದುರಾಳಿ ಗುಂಪಿನ ಯುವಕರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ಕಡೆಯ ದೂರುಗಳನ್ನು ಸ್ವೀಕರಿಸಿರುವ ರಾಯದುರ್ಗಂ ಪೊಲೀಸರು ಘಟನೆಯ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ ವಸತಿ ಶಾಲಾ ವಾರ್ಡನ್, ಪಾರು ಮಾಡಿದ ಸಿಬ್ಬಂದಿ