ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನ ಉಪನಗರದಲ್ಲಿ 25 ವರ್ಷದ ಮಹಿಳಾ ಟೆಕ್ಕಿಯೊಬ್ಬರನ್ನು ಸರಪಳಿಯಲ್ಲಿ ಬಂಧಿಸಿ, ಬೆಂಕಿ ಹಚ್ಚಿ ಸುಟ್ಟುಹಾಕಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮೃತಪಟ್ಟ ಟೆಕ್ಕಿಯನ್ನು ಆರ್.ನಂದಿನಿ (25) ಎಂದು ಗುರುತಿಸಲಾಗಿದೆ. ಅರ್ಧ ದೇಹ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಶನಿವಾರ ರಾತ್ರಿ ತಲಂಬೂರಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಹೇಳಿಕೆ ಪ್ರಕಾರ, ಮೃತ ಟೆಕ್ಕಿಯನ್ನು ಸರಪಳಿಯಿಂದ ಬಂಧಿಸಿ ಅವಳ ಕುತ್ತಿಗೆ, ಕೈ ಮತ್ತು ಕಾಲುಗಳ ಮೇಲೆ ಬ್ಲೇಡ್ ಹಲ್ಲೆ ಮಾಡಿರುವ ಸಾಧ್ಯತೆಗಳಿದ್ದು, ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ ಎಂದು ಶಂಕಿಸಲಾಗಿದೆ. ತನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಕ್ಕಾಗಿ ಮಹಿಳೆಯನ್ನು 27 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಆರೋಪಿಯನ್ನು ವೆಟ್ರಿಮಾರನ್ ಎಂದು ಗುರುತಿಸಲಾಗಿದೆ. ಇನ್ನು ಮೃತ ಪಟ್ಟ ಟೆಕ್ಕಿ ಮಧುರೈ ಮೂಲದ ನಂದಿನಿ ಎಂದು ತಿಳಿದು ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ತೊರೈಪಾಕ್ಕಂನಲ್ಲಿರುವ ಸಾಫ್ಟ್‌ವೇರ್ ಕಂಪನಿಯಲ್ಲಿ ಈ ಟೆಕ್ಕಿ ಕೆಲಸ ಮಾಡುತ್ತಿದ್ದರು. ಇನ್ನು ವೆಟ್ರಿಮಾರನ್ ಮತ್ತು ಮೃತ ನಂದಿನಿ ಸ್ನೇಹಿತರಾಗಿದ್ದರು. ಇದೇ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಆದರೆ, ಇತ್ತೀಚೆಗೆ ವೆಟ್ರಿಮಾರನ್ ನಂದಿನಿಗೆ ತನ್ನ ಬಗ್ಗೆ ಹೇಳಿಕೊಂಡಿದ್ದ, ನಿಜ ತಿಳಿದ ಬಳಿಕ ನಂದಿನಿ ಆತನೊಂದಿಗೆ ಅಂತರ ಕಾಪಾಡಿಕೊಂಡಿದ್ದಳು ಎನ್ನಲಾಗಿದೆ.
ಬಳಿಕ ನಂದಿನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಓಡಾಡುತ್ತಿದ್ದರಂತೆ, ಇದು ವೆಟ್ರಿಮಾರನ್ ಅವರನ್ನು ಕೆರಳಿಸಿತ್ತು. ತನ್ನಿಂದ ದೂರವಾದ ನಂದಿಯನ್ನು ಕೊಂದು ಸೇಡು ತೀರಿಸಿಕೊಳ್ಳಬೇಕು ಎಂದು ಆತ ತೀರ್ಮಾನ ಮಾಡಿದ್ದ. ನಂದಿನಿ ಹುಟ್ಟುಹಬ್ಬದ ದಿನವಾದ ಶನಿವಾರ, ಆರೋಪಿ ವೆಟ್ರಿಮಾರನ್ ಆಕೆಗೆ ಸರ್ಪ್ರೈಸ್ ನೀಡುವುದಾಗಿ ಹೇಳಿ ಹೊರಗೆ ಕರೆದೊಯ್ದಿದ್ದ. ಆರೋಪಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕಟ್ಟಿಹಾಕಿ ಬ್ಲೇಡ್‌ನಿಂದ ಗಾಯಗೊಳಿಸಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ. ಹೆಚ್ಚಿನ ಮಾಹಿತಿ ಸಂಪೂರ್ಣ ತನಿಖೆಯ ಬಳಿಕವೇ ತಿಳಿದು ಬರಬೇಕಿದೆ. ( ಐಎಎನ್ಎಸ್)
ಇದನ್ನು ಓದಿ: ಕಲಬುರಗಿ: ಕಾಂಗ್ರೆಸ್ ಮುಖಂಡನ ಪುತ್ರ ಕೊಲೆ, ಪೊಲೀಸರಿಗೆ ಶರಣಾದ ಆರೋಪಿ
ಬೆಂಗಳೂರು: ಮತ್ತೊಂದೆಡೆ ಬೆಂಗಳೂರಿನಲ್ಲಿ ರೌಡಿಶೀಟರ್‌ವೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಭಾನುವಾರ ಸಂಜೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಸಂದ್ರ ಬಳಿ ನಡೆದಿದೆ. ಜಯಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಹತ್ಯೆಯಾದ ರೌಡಿಶೀಟರ್ ಆಗಿದ್ದಾನೆ. ಜಯಪ್ರಕಾಶ್ 2006ರಲ್ಲಿ ಹತ್ಯೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.