ರಾಂಚಿ (ಜಾರ್ಖಂಡ್): ರಾಜ್ಯದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ರಿಮ್ಸ್‌ನಲ್ಲಿ ಕೈದಿಗಳ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಕೈದಿಯೊಬ್ಬರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಮಹಿಳಾ ಕೈದಿ ಸಾವಿಗೆ ಟಿಬಿ, ರಕ್ತಹೀನತೆ ಹಾಗೂ ಅಪೌಷ್ಟಿಕತೆ ಕಾರಣ ಎನ್ನಲಾಗಿದೆ. ಮಹಿಳಾ ಕೈದಿಯ ಹೆಸರು ಸೀತಾ ಕುಮಾರಿ ಎಂದು ಗುರುತಿಸಲಾಗಿದ್ದು, ವಯಸ್ಸು 30 ಎಂದು ಹೇಳಲಾಗಿದೆ. ಮಹಿಳಾ ಕೈದಿ ಕೊಲೆಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 9 ವರ್ಷಗಳಿಂದ ರಾಂಚಿಯ ಹೊತ್ವಾರ್ ಜೈಲಿನಲ್ಲಿ ಇರಿಸಲಾಗಿತ್ತು.
ಮಹಿಳಾ ಕೈದಿಯ ಮರಣೋತ್ತರ ಪರೀಕ್ಷೆ: ಮಾಹಿತಿ ಪ್ರಕಾರ, ಜೈಲಿನಲ್ಲಿದ್ದಾಗ ಮಹಿಳೆಯ ಆರೋಗ್ಯ ಹದಗೆಟ್ಟು ಹೋಗಿತ್ತು. ನಂತರ ಜೈಲು ಆಡಳಿತದ ವೈದ್ಯರು ತಪಾಸಣೆ ನಡೆಸಿದ ನಂತರ ಜುಲೈ 10 ರಂದು ರಿಮ್ಸ್‌ಗೆ ಕಳುಹಿಸಲಾಯಿತು. ರಿಮ್ಸ್‌ನಲ್ಲಿ ಸುಮಾರು 2 ದಿನಗಳ ಕಾಲ ಸೀತಾ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಆ ನಂತರ ಅಸ್ವಸ್ಥಗೊಂಡ ಕೈದಿಯನ್ನ ಡಾ.ವಿದ್ಯಾಪತಿ ಅವರ ಮೇಲ್ವಿಚಾರಣೆಯಲ್ಲಿ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಸುಮಾರು 10 ದಿನಗಳ ಕಾಲ ಚಿಕಿತ್ಸೆ ನಂತರ, ಜುಲೈ 21ರಂದು ಬೆಳಗ್ಗೆ ಮಹಿಳಾ ಕೈದಿ ಸಾವನ್ನಪ್ಪಿದ್ದಾರೆ. ಸಾವಿನ ಬಗ್ಗೆ ಜೈಲು ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದೆ. ಮಹಿಳೆಯ ಮರಣೋತ್ತರ ಪರೀಕ್ಷೆಗೆ ಸಾಧನಾ ಜೈಪುರಿಯಾ ಅವರನ್ನು ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲಾಗಿತ್ತು.
ಮೌನ ವಹಿಸಿದ ಜೈಲು ಆಡಳಿತ: ಅಪೌಷ್ಟಿಕತೆಯಿಂದ ಸಾವಿಗೆ ಕಾರಣಗಳ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ. ಅಷ್ಟಕ್ಕೂ ಜೈಲಿನಲ್ಲಿದ್ದ 30ರ ಹರೆಯದ ಮಹಿಳೆ ಅಪೌಷ್ಟಿಕತೆಗೆ ಬಲಿಯಾಗಿದ್ದು, ಈ ಮಹಿಳೆಗೆ ಯಾವ ರೀತಿಯ ಆಹಾರ ನೀಡಲಾಯಿತು. ಕಳೆದ ಕೆಲವು ದಿನಗಳಿಂದ, ರಾಂಚಿಯ ಹೊತ್ವಾರ್ ಜೈಲಿನಲ್ಲಿ ಕೈದಿಗಳ ಘಟನೆಗಳು ಮತ್ತು ಸಾವಿನ ಕುರಿತು ಜೈಲು ಆಡಳಿತದ ಮೇಲೆ ಹಲವು ರೀತಿಯ ಪ್ರಶ್ನೆಗಳು ಮೂಡುತ್ತಿವೆ. ಈ ಬಗ್ಗೆ ಜೈಲು ಆಡಳಿತ ಮಾತ್ರ ಮೌನ ವಹಿಸಿದೆ.
ಮಹಿಳಾ ಕೈದಿಯು ಇತರ ಹಲವು ಕಾಯಿಲೆಗಳನ್ನು ಹೊಂದಿದ್ದು, ಕಳೆದ ಹಲವು ದಿನಗಳಿಂದ ಆಕೆ ಗಂಭೀರ ಸ್ಥಿತಿಯಲ್ಲಿದ್ದರು. ಹೀಗಾಗಿ ಅವರನ್ನು ರಿಮ್ಸ್‌ಗೆ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಎಲ್ಲ ಮಾಹಿತಿ ಕಲೆಹಾಕಿ ಜೈಲು ನಿರ್ವಹಣೆ ಅಥವಾ ಬೇರಾವುದೇ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂದ ಪಟ್ಟ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ತನಿಖೆ ಬಳಿಕವೇ ನಿಖರ ಕಾರಣಗಳು ಗೊತ್ತಾಗಲಿದೆ ಎಂದು ಬಂಧೀಖಾನೆ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೊಳದಲ್ಲಿ ಮುಳುಗಿ ನಾಲ್ವರು ಶಾಲಾ ಬಾಲಕಿಯರು ಸಾವು!