ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆಗಸ್ಟ್ 13ಕ್ಕೆ ಮುಕ್ತಾಯಗೊಳ್ಳಲಿದೆ. ಬಳಿಕ ಫೇಸ್ಬುಕ್, ಟ್ವಿಟ್ಟರ್ ಮತ್ತು ಗೂಗಲ್ನಂತಹ ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆಗಳ ಅಧಿಕಾರಿಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈ ವೇಳೆ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2021ರ ನೂತನ ಐಟಿ ನಿಯಮಗಳ ಕುರಿತಾಗಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ. ಆಪರೇಟಿಂಗ್ ಕಾರ್ಯವಿಧಾನದಲ್ಲಿರುವ ಗೊಂದಲ ಹಾಗೂ ಕಾರ್ಯಾಚರಣೆಯ ಸಮಸ್ಯೆಗಳ ಕುರಿತು ಸಚಿವಾಲಯದ ಜತೆಗೆ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಭಾರತದ ಹೊಸ IT ಕಾನೂನು ತಂದ ಬದಲಾವಣೆ: 1.5 ಲಕ್ಷಕ್ಕೂ ಹೆಚ್ಚು ಆಕ್ಷೇಪಾರ್ಹ ವಿಷಯ ತೆಗೆದು ಹಾಕಿದ ಗೂಗಲ್
ಕೆಲ ತಿಂಗಳ ಹಿಂದೆ ಹೊಸ ಐಟಿ ನಿಯಮಗಳನ್ನು ಜಾರಿಗೆ ತರುವ ವಿಚಾರವಾಗಿ ಸರ್ಕಾರ ಹಾಗೂ ಟೆಕ್ ದೈತ್ಯ ಸಂಸ್ಥೆಗಳ ನಡುವೆ ಸಮರ ನಡೆಯುತ್ತಿತ್ತು. ಕ್ಯಾಬಿನೆಟ್ ಪುನರ್ ರಚನೆಯ ನಂತರ, ಅಶ್ವಿನಿ ವೈಷ್ಣವ್ ಐಟಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.