ನಾಗ್ಪುರ(ಮಹಾರಾಷ್ಟ್ರ): ತನ್ನ ಸಂಬಂಧಿಕರ ಮೇಲಿನ ಸೇಡು ತೀರಿಸುವ ಉದ್ದೇಶದಿಂದ ಸ್ವಂತ ಮಗಳ ಕೈಯ್ಯಲ್ಲೇ ಡೆತ್‌ನೋಟ್ ಬರೆಸಿ, ಆಕೆಯನ್ನು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿರುವ ಆರೋಪದಡಿ 40 ವರ್ಷದ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 6 ರಂದು ನಾಗ್ಪುರದ ಕಲಾಮ್ನಾ ಪ್ರದೇಶದಲ್ಲಿ 16 ವರ್ಷದ ಬಾಲಕಿ ತನ್ನ ಮನೆಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅದೇ ಕೊಠಡಿಯಲ್ಲಿ ದೊರೆತ ಐದು ಪುಟಗಳ ಡೆತ್‌ನೋಟ್ ಆಧಾರದ ಮೇಲೆ ಬಾಲಕಿಯ ಮಲತಾಯಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅಜ್ಜಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆಯ ಸಂದರ್ಭದಲ್ಲಿ ಕೊಲೆಯ ಹಿಂದೆ ಬಾಲಕಿಯ ತಂದೆಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಇದೀಗ ಸಂಬಂಧಿಕರ ಮೇಲೆ ಸೇಡು ತೀರಿಸಲು ತನ್ನ ಮಗಳ ಜೀವವನ್ನೇ ಬಲಿ ಪಡೆದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂಬಂಧಿಕರನ್ನು ಹೆದರಿಸಲೆಂದು ಮಗಳ ಕೈಯ್ಯಲ್ಲಿ ಸಂಬಂಧಿಕರ ಮೇಲೆ ಆರೋಪ ಹೊರಿಸಿರುವಂತೆ, ಐದು ಪುಟಗಳ ಡೆತ್‌ನೋಟ್ ಬರೆಸಿದ್ದಾನೆ. ನಂತರ ಮಗಳಿಗೆ ಸ್ಟೂಲ್ ಮೇಲೆ ನಿಂತು ಕುತ್ತಿಗೆಗೆ ನೇಣು ಬಿಗಿದುಕೊಳ್ಳುವಂತೆ ಸೂಚಿಸಿದ್ದಾನೆ. ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿ, ನೇಣು ಬಿಗಿದು ನಿಂತಿದ್ದ ಸ್ಟೂಲ್ ಅನ್ನು ಕಾಲಿನಿಂದ ಒದ್ದು, ಕ್ರೌರ್ಯ ಎಸಗಿದ್ದಾನೆ. ನೇಣು ಬಿಗಿದು ಬಾಲಕಿ ಸಾವನ್ನಪ್ಪಿದ್ದಾಳೆ. ದುಷ್ಕೃತ್ಯದ ವೇಳೆ ತಂದೆಯ ಜೊತೆ ಆಕೆಯ 12 ವರ್ಷದ ಸಹೋದರಿಯೂ ಪಕ್ಕದಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರಂಭದಲ್ಲಿ ಡೆತ್‌ನೋಟ್ ಆಧಾರದಲ್ಲಿ ಐವರು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯಲ್ಲಿ ಏನೋ ತಪ್ಪಾಗಿದೆ ಎಂಬುದು ಗೊತ್ತಾಗಿ, ತನಿಖಾಧಿಕಾರಿಗಳು ಸಂತ್ರಸ್ತೆಯ ತಂದೆಯ ಮೊಬೈಲ್ ಪರಿಶೀಲಿಸಿದ್ದಾರೆ. ಆಗ ಮೊಬೈಲ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಫೋಟೋಗಳು ದೊರಕಿವೆ. ಇದರ ಆಧಾರದಲ್ಲಿ ತಂದೆಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಮಗಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಮೊದಲ ಹೆಂಡತಿ 2016ರಲ್ಲಿ ಸಾವನ್ನಪ್ಪಿದ್ದು, ಎರಡನೇ ಹೆಂಡತಿ ಕೂಡ ಮನೆ ಬಿಟ್ಟು ಹೋಗಿದ್ದಳು. ಕೊಲೆ ಹಿಂದಿನ ನಿಜವಾದ ಉದ್ದೇಶವೇನು ಎಂಬುದನ್ನು ತನಿಖೆ ಮಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 'ಈಗ ಮದುವೆ ಮಾಡ್ಕೊಳ್ಳಿ..' ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳೆ