ನವದೆಹಲಿ : ವಿವಿಧ ರಾಜ್ಯದ ಗಡಿಗಳಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಶ್ರದ್ಧಾಂಜಲಿ ದಿವಸ್ ಆಗಿ ಆಚರಿಸುತ್ತಿದ್ದಾರೆ.
ನವೆಂಬರ್ 26 ರಂದು ನೂತನ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಚಲೋ ಆಂದೋಲನ ನಡೆಸುವ ವೇಳೆ ಸಾವನ್ನಪ್ಪಿದ ರೈತರ ಸ್ಮರಣಾರ್ಥವಾಗಿ ಡಿಸೆಂಬರ್ 20, ಈ ದಿನವನ್ನ ಶ್ರದ್ಧಾಂಜಲಿ ದಿವಸ್ ಎಂದು ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾದ ಅಂಗಸಂಸ್ಥೆಯಾದ ಅಖಿಲ ಭಾರತ ಕಿಸಾನ್ ಸಭಾ ತೀರ್ಮಾನಿಸಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 33 ರೈತರು ನವೆಂಬರ್ 26ರಿಂದ ಅಪಘಾತಗಳು, ಅನಾರೋಗ್ಯ ಮತ್ತು ಶೀತ ವಾತಾವರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ರೈತ ಸಂಸ್ಥೆ ಹೇಳಿಕೊಂಡಿದೆ. ಇಂದು ರೈತರು ಮತ್ತು ಎಲ್ಲಾ ವರ್ಗದ ಜನರು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂತಾಪ ಸಲ್ಲಿಸಲಿದ್ದಾರೆ.
ಇದರ ಜತೆಗೆ ಪಂಜಾಬ್ ಅಸ್ಮಿತೆಯನ್ನ ಹೆಚ್ಚು ಹೆಚ್ಚು ತೋರ್ಪಡಿಸಿಕೊಳ್ಳುವ ಮೂಲಕ ಹೋರಾಟಕ್ಕೆ ಪ್ರೇರಣೆ ನೀಡಲು ಪಂಜಾಬ್ ಯುವಕರು ಮುಂದಾಗಿದ್ದಾರೆ. ಯುವಕರಿಗೆ ಪಗಡಿ ಜತೆಗೆ ಟ್ಯಾಟೋ ಸೇರಿ ಪಂಜಾಬ್ ಅಸ್ಮಿತೆಯ ಮೂಲಕ ಹೋರಾಟ ತೀವ್ರಗೊಳಿಸ್ತಿದ್ದಾರೆ.