ನವದೆಹಲಿ: ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆದ 8 ನೇ ಸುತ್ತಿನ ಮಾತುಕತೆ ವಿಫಲವಾಗಿದೆ. ಮೂರು ಕಾಯ್ದೆಗಳನ್ನು ಹಿಂಪಡೆದರೆ ಮಾತ್ರ ನಾವು ಮನೆಗಳಿಗೆ ಹಿಂದಿರುತ್ತೇವೆ. ಇಲ್ಲವಾದಲ್ಲಿ, ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಹಲವು ಆದೇಶಗಳು ಕೃಷಿಯನ್ನು ರಾಜ್ಯ ವಿಷಯ ಎಂದು ಘೋಷಿಸಿವೆ. ಹಾಗಾಗಿ ಕೇಂದ್ರ ಸರ್ಕಾರ ಕೃಷಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಇಷ್ಟು ಸುತ್ತಿನ ಮಾತುಕತೆಗಳು ನಡೆದರೂ, ನೀವು ನಮ್ಮ ಸಮಸ್ಯೆಯನ್ನು ಬಗೆಹರಿಸಿಲ್ಲ. ಈಗಲೂ ನೀವು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ದಯವಿಟ್ಟು ನಿಮ್ಮ ಸ್ಪಷ್ಟ ನಿರ್ಧಾರ ಏನೆಂಬುದನ್ನು ತಿಳಿಸಿದರೆ, ನಾವು ಹೋಗುತ್ತೇವೆ, ಸಮಯ ಯಾಕೆ ವ್ಯರ್ಥ ಮಾಡಬೇಕು ಎಂದು ರೈತ ಮುಖಂಡರು ಕೇಂದ್ರ ಸಚಿವರಿಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಯಾವುದೇ ಕಾರಣಕ್ಕೂ ಕಾಯ್ದೆಗಳನ್ನು ರದ್ದುಗೊಳಿಸುವುದಿಲ್ಲ. ಈ ಪ್ರಸ್ತಾಪ ಹೊರತು ಪಡಿಸಿ ಮತ್ಯಾವುದೇ ಬೇಡಿಕೆ ಇದ್ದರೂ ಪೂರೈಸುತ್ತೇವೆ ಎಂದಿದ್ದಾರೆ. ಅಲ್ಲದೆ, ಜನವರಿ 15 ನೇ ತಾರೀಖು ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ತಿಳಿದು ಬಂದಿದೆ.
ಇದೇ ಜನವರಿ 26 ರ ಗಣರಾಜ್ಯೋತ್ಸವದಂದು, ರೈತರು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಈವರೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 60 ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ.
ವಿಜ್ಞಾನ ಭವನದಲ್ಲಿ ಸುಮಾರು 40 ಕ್ಕೂ ಹೆಚ್ಚು ಸಂಘಟನೆಗಳೊಂದಿಗೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪಿಯುಷ್ ಗೋಯಲ್ ಮತ್ತು ಸೋಮ್ ಪ್ರಕಾಶ್ ಸಭೆ ನಡೆಸಿದರು. ಡಿಸೆಂಬರ್ 30 ರಂದು ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ ವಿದ್ಯುತ್ ಹಾಗೂ ಕೃಷಿ ತ್ಯಾಜ್ಯ ಸುಡುವಿಕೆಗೆ ಸಂಬಂಧಿಸಿದಂತೆ ಸರ್ಕಾರ ಎರಡು ಬೇಡಿಕೆಗಳನ್ನು ಒಪ್ಪಿಕೊಂಡಿತ್ತು. ಆದರೆ, ಕಾಯ್ದೆಗಳನ್ನು ಹಿಂಪಡೆಯಲು ಮಾತ್ರ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.