ನವದೆಹಲಿ : ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಕೃಷಿ ಕಾನೂನುಗಳು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ನಡುವಿನ ಅಡೆತಡೆಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ. ತಾಂತ್ರಿಕ ಪ್ರಗತಿ ಮತ್ತು ಹೂಡಿಕೆಗಳಿಂದ ಲಾಭ ಪಡೆಯಲು ರೈತರಿಗೆ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುತ್ತದೆ. ಒಂದು ವಲಯವು ಬೆಳೆದಾಗ ಅದರ ಪರಿಣಾಮವು ಇತರ ಹಲವಾರು ಕ್ಷೇತ್ರಗಳ ಮೇಲೆ ಕಂಡು ಬರುತ್ತದೆ ಎಂದು ಪ್ರಧಾನಿ ಹೇಳಿದರು.
ಇದನ್ನು ಉದಾಹರಣೆ ಸಮೇತ ಅರ್ಥೈಸಲು ಪ್ರಯತ್ನಿಸಿದ ಮೋದಿ, "ಕೈಗಾರಿಕೆಗಳ ನಡುವೆ ಅನಗತ್ಯ ಗೋಡೆಗಳನ್ನು ನಿರ್ಮಿಸಿದಾಗ ಏನಾಗಬಹುದು ಎಂದು ಒಮ್ಮ ಊಹಿಸಿ. ಹಾಗಾದಾಗ ಯಾವುದೇ ಉದ್ಯಮವು ವೇಗವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ" ಎಂದು ಇಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ವರ್ಚುವಲ್ 93 ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.
ಆನಂತರ ಅವರು ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳ ಕಡೆಗೆ ನಿರ್ದಿಷ್ಟವಾಗಿ ಗಮನ ಹರಿಸಿ ಸ್ಪಷ್ಟನೆ ನೀಡಲಾರಂಭಿಸಿದರು. ಭಾರತದ ಆರ್ಥಿಕತೆ ಬೆಳೆಯಲು ಬೇಕಾಗಿರುವುದು ಗೋಡೆಗಳಲ್ಲ. ಆದರೆ, ಹೆಚ್ಚು ಹೆಚ್ಚು ಸೇತುವೆಗಳು. ಅವು ಪರಸ್ಪರ ಅಭಿವೃದ್ಧಿಗೆ ಬೆಂಬಲಿಸಿ ಸಹಾಯ ಮಾಡುತ್ತವೆ ಎಂದು ಅವರು ವಿವಿಧ ಕೈಗಾರಿಕೆಗಳಲ್ಲಿನ ಅಡೆತಡೆಗಳ ಬಗ್ಗೆ ಹೇಳಿದರು.
ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಲಾದ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ದೇಶಾದ್ಯಂತ ಕೋಟ್ಯಂತರ ರೈತರು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದ ಅನ್ನದಾತರು ಕಳೆದ ಕೆಲವು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ರಾಜಕೀಯ ಪಕ್ಷಗಳ ಬೆಂಬಲವನ್ನೂ ಪಡೆದಿದ್ದಾರೆ. ಮೂರು ಕಾನೂನುಗಳನ್ನು ಸಂಪೂರ್ಣ ರದ್ದುಗೊಳಿಸುವಂತೆ ರೈತರು ಕೋರಿದ್ದು, ಕೇಂದ್ರ ಸರ್ಕಾರದೊಂದಿಗಿನ ಅನೇಕ ಸುತ್ತಿನ ಮಾತುಕತೆ ಬಿಕ್ಕಟ್ಟನ್ನು ನಿವಾರಿಸುವಲ್ಲಿ ವಿಫಲವಾಗಿವೆ.