ನವದೆಹಲಿ: ಯುನೈಟೆಡ್ ಕಿಂಗಡಮ್ ದೇಶದ ಇಂಧನ ಉತ್ಪಾದನಾ ಕಂಪನಿ ಕೇರ್ನ್ ಎನರ್ಜಿ ಪಿಎಲ್ಸಿ ಭಾರತದ ಸರ್ಕಾರಿ ಸ್ವಾಮಿತ್ವದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ವಿರುದ್ಧ ನ್ಯೂಯಾರ್ಕಿನ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ಹೂಡಿದೆ.
ಭಾರತ ಸರ್ಕಾರವು ಕೇರ್ನ್ ಕಂಪನಿಗೆ ಪುನರಾವರ್ತಿತ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ ಕಂಪನಿಯು, ಭಾರತ ಸರ್ಕಾರ ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ತನಗೆ ಪರಿಹಾರ ಕೊಡಿಸಬೇಕೆಂದು ಮೇ 14 ರಂದು ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ಮೊರೆ ಹೋಗಿತ್ತು. ಈ ಪ್ರಕರಣದಲ್ಲಿ ಕೇರ್ನ್ ಕಂಪನಿಯ ಪರವಾಗಿ ಆದೇಶ ಬಂದಿದ್ದು, ಕೇರ್ನ್ ಎನರ್ಜಿಗೆ ಭಾರತ ಸರ್ಕಾರ 21,600 ಕೋಟಿ ರೂಪಾಯಿ ಮೊತ್ತದ ಪರಿಹಾರ ನೀಡಬೇಕೆಂದು ಇತ್ತೀಚೆಗೆ ನ್ಯಾಯಮಂಡಳಿಯು ಆದೇಶ ನೀಡಿದೆ. ಈಗ ಈ ಆದೇಶವನ್ನು ಜಾರಿಗೊಳಿಸಲು ಏರ್ ಇಂಡಿಯಾ ಆಸ್ತಿಗಳನ್ನು ಜಪ್ತಿ ಮಾಡಬೇಕೆಂದು ಕೋರಿ ಕಂಪನಿ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದೆ.
ಆದರೆ ಈ ಬಗ್ಗೆ ಭಾರತ ಸರ್ಕಾರಕ್ಕಾಗಲಿ ಅಥವಾ ಏರ್ ಇಂಡಿಯಾ ಕಂಪನಿಗಾಗಲಿ ಯಾವುದೇ ನೋಟಿಸ್ ಈವರೆಗೂ ಬಂದಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಒಂದೊಮ್ಮೆ ನೋಟಿಸ್ ಬಂದಲ್ಲಿ ಈ ಬಗ್ಗೆ ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ಪಿಟಿಐ ಹೇಳಿದೆ.
ಪ್ರಕರಣದ ಹಿನ್ನೆಲೆ
ಕೇರ್ನ್ ಎನರ್ಜಿ ಇದು ಸ್ಕಾಟ್ಲೆಂಡ್ ಮೂಲದ ಕಂಪನಿಯಾಗಿದ್ದು, 1994ರಲ್ಲಿ ಭಾರತದ ಅನಿಲ ಉತ್ಪಾದನೆ ಕ್ಷೇತ್ರದಲ್ಲಿ ಬಂಡವಾಳ ಹೂಡಿತ್ತು. ಇದಾಗಿ ದಶಕದ ನಂತರ ಕಂಪನಿಯು ರಾಜಸ್ಥಾನದಲ್ಲಿ ಬೃಹತ್ ಅನಿಲ ನಿಕ್ಷೇಪವನ್ನು ಪತ್ತೆ ಮಾಡಿತ್ತು. ನಂತರ ಕೇರ್ನ್ ಇಂಡಿಯಾ ಇಂಕ್ ಎಂಬ ಹೆಸರಿನಲ್ಲಿ ಹೊಸ ಕಂಪನಿಯೊಂದನ್ನು ಹುಟ್ಟು ಹಾಕಿತ್ತು. ಅಲ್ಲಿಯವರೆಗೆ ಕಂಪನಿಯ ವ್ಯವಹಾರಗಳು 9 ಉಪ ಕಂಪನಿಗಳ ಮೂಲಕ ನಡೆಯುತ್ತಿದ್ದವು. ಈ ಎಲ್ಲ ಕಂಪನಿಗಳ ಆಸ್ತಿಗಳನ್ನು ಒಂದೇ ಕಡೆ ಕೂಡಿಸಿ ಅವನ್ನು ಹೊಸ ಕಂಪನಿಗೆ ಕೇರ್ನ್ ವರ್ಗಾಯಿಸಿ ಅದನ್ನು ಬಾಂಬೆ ಸ್ಟಾಕ್ ಎಕ್ಸಚೇಂಜಿನಲ್ಲಿ ಲಿಸ್ಟಿಂಗ್ ಮಾಡಿತ್ತು.
ಇದಾಗಿ 5 ವರ್ಷಗಳ ನಂತರ ಸರ್ಕಾರವು 'ಹಿಂದಿನ ತೆರಿಗೆ ಕಾನೂನು' (retroactive tax law) ಜಾರಿಗೊಳಿಸಿತು. ಈ ಕಾಯ್ದೆಯಡಿ ಕಂಪನಿಗೆ ಒಟ್ಟು 10,247 ಕೋಟಿ ರೂಪಾಯಿ ದಂಡ ಹಾಗೂ ಬಡ್ಡಿ ಕಟ್ಟುವಂತೆ ಆದೇಶಿಸಲಾಗಿತ್ತು. ಹಳೆ ಕಂಪನಿಗಳನ್ನು ವಿಲೀನಗೊಳಿಸಿದ ಪ್ರಕ್ರಿಯೆಯಲ್ಲಿ ಕೇರ್ನ್ ಎನರ್ಜಿ 24,500 ಕೋಟಿ ರೂಪಾಯಿಗಳಷ್ಟು ಬಂಡವಾಳ ಲಾಭ ಮಾಡಿಕೊಂಡಿರುವುದರಿಂದ ಈ ದಂಡ ವಿಧಿಸಲಾಗಿತ್ತು.
ಕೇರ್ನ್ ಕಂಪನಿಯ ಶೇರು, ಡಿವಿಡೆಂಡ್ ಹಾಗೂ ತೆರಿಗೆ ರಿಫಂಡ್ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಈ ದಂಡವನ್ನು ವಸೂಲಿ ಮಾಡಿತ್ತು. ಸರ್ಕಾರದ ಈ ಕ್ರಮವನ್ನು ಕೇರ್ನ್ ಹೇಗ್ನಲ್ಲಿರುವ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ನ್ಯಾಯಮಂಡಳಿಯು ಕಂಪನಿಯ ಪರವಾಗಿ ತೀರ್ಪು ನೀಡಿದ್ದು, ಕಂಪನಿಗೆ ಭಾರತ ಸರ್ಕಾರ 12,600 ಕೋಟಿ ರೂಪಾಯಿ ಪಾವತಿಸಲು ಆದೇಶಿಸಿದೆ.