ಹೈದರಾಬಾದ್: ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಲ್ಲಿ ನಡೆದ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ವಿವಿಧ ಸುದ್ದಿಸಂಸ್ಥೆಗಳು, ಏಜೆನ್ಸಿಗಳು ಸಮೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಯಾವ ರಾಜ್ಯದಲ್ಲಿ ಯಾರಿಗೆ ಅಧಿಕಾರ ಸಿಗಲಿದೆ ಎಂಬ ಬಗ್ಗೆ ಭವಿಷ್ಯ ನುಡಿದಿವೆ.
ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಹುತೇಕ ಎಲ್ಲ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿವೆ. 403 ಕ್ಷೇತ್ರಗಳ ಪೈಕಿ ಬಿಜೆಪಿಗೆ 262ರಿಂದ 277ರವರೆಗೆ ಸ್ಥಾನ ನೀಡಿದ್ದು, ಸಮಾಜವಾದಿ ಪಕ್ಷ 119ರಿಂದ 134 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿವೆ.
ಪಂಜಾಬ್ನಲ್ಲಿ ಕಾಂಗ್ರೆಸ್ ಬಿಕ್ಕಟ್ಟಿನ ಲಾಭ ಪಡೆದುಕೊಳ್ಳುವಲ್ಲಿ ಎಎಪಿ ಯಶಸ್ವಿಯಾಗಿದ್ದು, ಎಲ್ಲ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ ಅಧಿಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಲಿದೆ ಎಂದು ಭವಿಷ್ಯ ಹೇಳಿವೆ. ಎಎಪಿ 117 ಕ್ಷೇತ್ರಗಳ ಪೈಕಿ 70-75 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 27-33 ಸ್ಥಾನ ಜಯ ಸಾಧಿಸಲಿದೆ ಎಂದು ಅಂಕಿಅಂಶಗಳನ್ನು ಹೊರಹಾಕಿವೆ.
ಇದನ್ನೂ ಓದಿ: ಉತ್ತರ ಪ್ರದೇಶ: ಕೊನೆ ಹಂತದಲ್ಲಿ ಶೇ. 54ರಷ್ಟು ವೋಟಿಂಗ್: ಎಲ್ಲರ ಚಿತ್ತ ಫಲಿತಾಂಶದತ್ತ!
ಉಳಿದಂತೆ ಗೋವಾದಲ್ಲಿ ಬಿಜೆಪಿ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಲಿದ್ದು, ಉತ್ತರಾಖಂಡದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಡಲಿದೆ ಎಂದು ತಿಳಿಸಿವೆ. ಉಳಿದಂತೆ ಮಣಿಪುರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂಬುದನ್ನು ಸಮೀಕ್ಷೆಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳ ವಿಧಾನಸಭೆಗೆ 7 ಹಂತದಲ್ಲಿ ಮತದಾನವಾಗಿದ್ದು, ಉಳಿದಂತೆ ಪಂಜಾಬ್ನ 117 ಕ್ಷೇತ್ರಗಳಿಗೆ ಒಂದೇ ಹಂತ, ಉತ್ತರಾಖಂಡ್ನ 70 ಕ್ಷೇತ್ರ, ಗೋವಾದ 40 ಸ್ಥಾನಗಳಿಗೆ ಒಂದು ಹಂತದಲ್ಲಿ ವೋಟಿಂಗ್ ಆಗಿದ್ದು, ಮಣಿಪುರದ 60 ಸ್ಥಾನಗಳಿಗೆ ಎರಡು ಹಂತದಲ್ಲಿ ಮತದಾನವಾಗಿದೆ. ಎಲ್ಲ ಕ್ಷೇತ್ರಗಳ ಫಲಿತಾಂಶ ಮಾರ್ಚ್ 10ರಂದು ಬಹಿರಂಗಗೊಳ್ಳಲಿದೆ.
ಪೋಲ್ ಆಫ್ ಪೋಲ್ ಸಮೀಕ್ಷಾ ವರದಿ ಇಂತಿದೆ..
ಒಟ್ಟು ಕ್ಷೇತ್ರ | ಸರ್ಕಾರ ರಚನೆಗೆ ಬೇಕಾಗಿದ್ದು | ಸಮೀಕ್ಷೆ ಪ್ರಕಾರ ಗೆಲ್ಲುವ ಪಕ್ಷ | ಪೋಲ್ ಆಫ್ ಪೋಲ್ | |
ಉತ್ತರ ಪ್ರದೇಶ | 403 | 202 | ಬಿಜೆಪಿ | 231 |
ಪಂಜಾಬ್ | 117 | 59 | ಎಎಪಿ | 67 |
ಗೋವಾ | 40 | 21 | ಬಿಜೆಪಿ | 16 |
ಮಣಿಪುರ | 60 | 31 | ಬಿಜೆಪಿ | 30 |
ಉತ್ತರಾಖಂಡ | 70 | 36 | ಬಿಜೆಪಿ | 34 |