ಅಮ್ರೇಲಿ(ಗುಜರಾತ್): ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಸಿಂಹಿಣಿಯೊಂದು ಆರು ಜನರ ಮೇಲೆ ದಾಳಿ ಮಾಡಿದೆ. ಹೀಗಾಗಿ ಅರಣ್ಯ ಇಲಾಖೆ ಈಗಾಗಲೇ ಸಿಂಹಿಣಿ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದು, ಸೆರೆಗಾಗಿ ವಿವಿಧೆಡೆ ಬೋನುಗಳನ್ನೂ ಇರಿಸಲಾಗಿದೆ.
ಸಾಮಾನ್ಯ ಸಂದರ್ಭಗಳಲ್ಲಿ ಸಿಂಹಗಳು ಮತ್ತು ಸಿಂಹಿಣಿಗಳು ಜನರ ಮೇಲೆ ದಾಳಿ ಮಾಡುವುದಿಲ್ಲ. ಆದರೆ, ಇಲ್ಲಿನ ಜಾಫರಾಬಾದ್‌ನಲ್ಲಿ ತಾಲೂಕಿನ ಬಾಬರ್ಕೋಟ್ ಗ್ರಾಮದ ಬಳಿ ಒಂದೇ ದಿನ ಆರು ಜನರ ಮೇಲೆ ಸಿಂಹಿಣಿ ದಾಳಿ ಮಾಡಿದ್ದು, ಚಿಂತೆಗೀಡು ಮಾಡಿದೆ. ಗಾಯಾಳುಗಳಲ್ಲಿ ಅರಣ್ಯ ಇಲಾಖೆಯ ಇಬ್ಬರು ಮತ್ತು ಎಸ್‌ಆರ್‌ಡಿ ಇಬ್ಬರು ಸಿಬ್ಬಂದಿ ಸಹ ಸೇರಿದ್ದಾರೆ. ಈ ದಾಳಿ ನಡೆಸಿದ ಸಿಂಹಿಣಿಗೆ ರೇಬಿಸ್ ಇರುವ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸಿಂಹಿಣಿ ದಾಳಿಯ ನಂತರ ಗಾಯಗೊಂಡ ಮೂವರನ್ನು ಜಾಫ್ರಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಜಾಫರಾಬಾದ್‌ನ ಬಾಬರ್‌ಕೋಟ್ ರಸ್ತೆಯಲ್ಲಿ ವಾಹನ ಸವಾರರು ಜಾಗ್ರತೆ ವಹಿಸುವಂತೆ ಅಧಿಕಾರಿಗಳು ಸುತ್ತ - ಮುತ್ತಲ್ಲಿನ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಜೊತೆಗೆ ಈ ಸಿಂಹಿಣಿಯನ್ನು ಹಿಡಿಯುವವರೆಗೂ ಮಾರ್ಗ ಬಳಸಬೇಡಿ ಹಾಗೂ ತೆರೆದ ವಾಹನಗಳಲ್ಲಿ ತೆರಳದಂತೆ ಶಾಸಕ ಅಮರೀಶ್ ದೇರೆ ಮನವಿ ಮಾಡಿದರು.
ಇತ್ತ, ಅರಣ್ಯ ಇಲಾಖೆ ತಂಡ ವಾಹನಗಳಿಗೆ ಸಿಂಹಗಳು ಮತ್ತು ಸಿಂಹಿಣಿಗಳ ಸ್ಪೀಕರ್‌ಗಳನ್ನು ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಹ ಮಾಡುತ್ತಿದೆ. ಸಿಂಹವನ್ನು ಹಿಡಿಯುವವರೆಗೂ ಮನೆಯಿಂದ ಯಾರೂ ಹೊರಗೆ ಹೆಚ್ಚಾಗಿ ಬರಬೇಡಿ ಎಂದು ಪ್ರಚಾರ ಮಾಡುತ್ತಿದೆ. ಮತ್ತೊಂದೆಡೆ, ಬಾಬರ್‌ಕೋಟ್ ರಸ್ತೆಯಲ್ಲಿ ಪೊಲೀಸರ ಭದ್ರತೆಯನ್ನೂ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆಯಲು ಹೋದ ಡಿಎಸ್ಪಿ ಮೇಲೆ ಟ್ರಕ್ ಹರಿಸಿ ಕೊಲೆ.. ಹರಿಯಾಣದಲ್ಲಿ ಭೀಕರ ಘಟನೆ