ಕೋಲ್ಕತಾ : ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಜಗದೀಪ್ ಧಾಂಕರ್ ಅಧಿಕಾರ ವಹಿಸಿಕೊಂಡ ಆರಂಭದಿಂದಲೇ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಅವರ ಮಧ್ಯೆ ವಾಕ್ಸಮರದ ಸರಣಿ ಆರಂಭವಾಗಿತ್ತು.
ಆದರೆ, ಇದೀಗ ವಿಧಾನಸಭಾ ಚುನಾವಣೆ ಮುಗಿದು ಮತ್ತೊಮ್ಮೆ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ನಂತರ ಇಬ್ಬರ ಮಧ್ಯೆ ಕದನ ವಿರಾಮವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಈ ನಿರೀಕ್ಷೆಗಳು ಹುಸಿಯಾಗಿವೆ. ಇಬ್ಬರ ನಡುವಿನ ವಾಗ್ಯುದ್ಧ ಮುಂದುವರೆದಿದೆ. ಚುನಾವಣೆಯ ನಂತರ ರಾಜ್ಯದೆಲ್ಲೆಡೆ ಹಿಂಸಾಚಾರಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರದ ವಿರುದ್ಧ ಮತ್ತಷ್ಟು ಪ್ರಖರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಸಹಜವಾಗಿಯೇ ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಕಣ್ಣು ಕೆಂಪಗಾಗಿಸಿದೆ.
ಹಿಂಸಾಚಾರದಿಂದ ನಲುಗಿರುವ ಕೂಚ್ ಬೆಹಾರ್ ಜಿಲ್ಲೆಗೆ ಗುರುವಾರ ಬೆಳಗ್ಗೆ ತಲುಪಿದ ರಾಜ್ಯಪಾಲ ಧಾಂಕರ್ ಸಿಟಾಲಕುಚಿ, ದಿನ್ಹಾಟಾ ಮತ್ತು ಸಿತಾಯ್ ಪ್ರದೇಶಗಳಿಗೆ ಭೇಟಿ ಖುದ್ದಾಗಿ ಪರಿಸ್ಥಿತಿಯನ್ನು ಅವಲೋಕಿಸಿದರು. ಕೂಚ್ ಬೆಹಾರ್ ಬಿಜೆಪಿ ಸಂಸದ ನಿಸಿಥ್ ಪ್ರಾಮಾಣಿಕ ರಾಜ್ಯಪಾಲರ ಜೊತೆಗೆ ಇದ್ದರು.
ಈ ಮಧ್ಯೆ ಹಿಂಸಾ ಪೀಡಿತ ಹಲವಾರು ಪ್ರದೇಶಗಳ ಮೂಲಕ ತೆರಳುವ ಮಾರ್ಗದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರಿಗೆ ಕಪ್ಪು ಬಾವುಟ ತೋರಿಸಿ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದ ಘಟನೆಗಳು ನಡೆದವು.
ಟಿಎಂಸಿ ಕಾರ್ಯಕರ್ತರ ಪ್ರತಿಭಟನೆಗಳಿಂದ ಕೋಪಗೊಂಡ ರಾಜ್ಯಪಾಲ ಧಾಂಕರ್ ಒಂದು ಹಂತದಲ್ಲಿ ಕಾರಿನಿಂದಿಳಿದು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ರನ್ನು ತರಾಟೆಗೆ ತೆಗೆದುಕೊಂಡರು.
ತಾವು ಬರುವ ಮಾಹಿತಿ ಇದ್ದರೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಇನ್ಸ್ಪೆಕ್ಟರ್ ವಿರುದ್ಧ ಕೆಂಡಾಮಂಡಲರಾದ ಧಾಂಕರ್, ರಾಜ್ಯದಲ್ಲಿ ರಾಜ್ಯಪಾಲರಾದ ತಮಗೇ ಇಷ್ಟು ಬೆದರಿಕೆ ಇರಬೇಕಾದರೆ ಇನ್ನು ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದರು.
ಈ ಘಟನೆಯ ನಂತರ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಧಾಂಕರ್, ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರ ನಡೆಯುತ್ತಿರುವ ಹಿಂಸಾಚಾರಗಳಿಗೆ ಸಿಎಂ ಮಮತಾ ಬ್ಯಾನರ್ಜಿಯೇ ಕಾರಣ ಎಂದು ನೇರವಾಗಿ ಆರೋಪಿಸಿದರು.
ಚುನಾವಣೆಗಳ ಸಮಯದಲ್ಲಿ ಹಲವಾರು ರ್ಯಾಲಿಗಳಲ್ಲಿ ಮಮತಾ ಮಾಡಿದ ಪ್ರಚೋದನಾತ್ಮಕ ಭಾಷಣಗಳ ಕಾರಣದಿಂದಲೇ ಈಗ ಹಿಂಸಾಚಾರ ನಡೆಯುತ್ತಿದೆ ಎಂದು ಹೇಳಿದರು.
ಕನಿಷ್ಠ ಈಗಲಾದರೂ ರಾಜ್ಯ ಸರ್ಕಾರ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಲು ರಾಜಭವನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇನ್ನು ರಾಜ್ಯಪಾಲರ ಈ ಹೇಳಿಕೆಗಳಿಗೆ ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯೆ ನೀಡಲು ತಡ ಮಾಡಲಿಲ್ಲ. ಈ ಕುರಿತು ಮಾತನಾಡಿದ ಡುಂ ಡುಂ ಕ್ಷೇತ್ರದ ಟಿಎಂಸಿ ಸಂಸದ ಸೌಗತಾ ರಾಯ್, ಆರಂಭದಿಂದಲೇ ರಾಜ್ಯಪಾಲ ಧಾಂಕರ್ ರಾಜ್ಯ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಸಂವಿಧಾನ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಚುನಾವಣೆಗಳು ಮುಗಿದರೂ ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲ ಹಾಗೂ ಸಿಎಂ ಮಮತಾ ಮಧ್ಯದ ಜಟಾಪಟಿಗಳು ನಿಲ್ಲುವ ಯಾವುದೇ ಲಕ್ಷಣಗಳಿಲ್ಲ. ಇದು ಎಲ್ಲಿಗೆ ಹೋಗಿ ಮುಟ್ಟಲಿದೆ ಎಂಬುದು ರಾಜಕೀಯ ವಲಯದಲ್ಲಿ ಸದ್ಯ ಚರ್ಚೆಯ ವಿಷಯವಾಗಿದೆ.