ಪಣಜಿ (ಗೋವಾ) : ಮಹಾರಾಷ್ಟ್ರ ರಾಜ್ಯಪಾಲರ ನಿರ್ದೇಶನದಂತೆ ವಿಶ್ವಾಸಮತ ಪರೀಕ್ಷೆಗೆ ಮುನ್ನ ಗುವಾಹಟಿಯಲ್ಲಿ ಬೀಡು ಬಿಟ್ಟಿರುವ ಶಿವಸೇನೆಯ ಬಂಡಾಯ ಶಾಸಕರು ಗುರುವಾರ ಮುಂಬೈಗೆ ತೆರಳುವ ಮೊದಲು ಗೋವಾ ಅಥವಾ ಕಾರವಾರಕ್ಕೆ ಬಂದಿಳಿಯುವ ಸಾಧ್ಯತೆಯಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಡೆ, ಶಿಂದೆ ತಂಡ ತಡವಾಗಿ ಬಂದರೆ ಅವರು ಇಲ್ಲೇ ಉಳಿಯುವ ಸಾಧ್ಯತೆಯಿದೆ. ಒಂದು ವೇಳೆ ಬೇಗ ಬಂದಲ್ಲಿ ಅವರೆಲ್ಲರೂ ಕರ್ನಾಟಕದ ಕಾರವಾರಕ್ಕೆ ಹೋಗುವ ಸಾಧ್ಯತೆಯಿದೆ. ಅವರೆಲ್ಲರೂ ಕಾರವಾರಕ್ಕೆ ಹೋಗಬೇಕಾದರೂ ಮೊದಲು ಗೋವಾ ವಿಮಾನ ನಿಲ್ದಾಣಕ್ಕೆ ಬರಲೇಬೇಕಿದೆ ಎಂದರು.
ಕಾರವಾರವು ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಿಂದ ಸುಮಾರು 90 ಕಿಮೀ ದೂರದಲ್ಲಿದೆ. ಗೋವಾದ ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಮಾತನಾಡಿ, ಅವರೆಲ್ಲರೂ ಗೋವಾಕ್ಕೆ ತೀರಾ ಸಮೀಪದಲ್ಲಿರುವುದರಿಂದ ಕಾರವಾರಕ್ಕೆ ಹೋಗುವುದು ಮತ್ತೊಂದು ತಂತ್ರಗಾರಿಕೆ ಇರಬಹುದು ಎಂದರು.
ಓದಿ: ಗುವಾಹಟಿಯಿಂದ ಗೋವಾಕ್ಕೆ ತೆರಳಲಿರುವ ಬಂಡಾಯ ಶಾಸಕರು.. ಏರ್ಪೋರ್ಟ್ನಲ್ಲಿ ಬಿಗಿ ಭದ್ರತೆ
ಎರಡನೇ ಬಾರಿ ದೇವಸ್ಥಾನಕ್ಕೆ ಭೇಟಿ: ಮಹಾರಾಷ್ಟ್ರದ ಬಂಡಾಯ ನಾಯಕ ಏಕನಾಥ್ ಶಿಂಧೆ ಗುವಾಹಟಿಯಿಂದ ಹೊರಡುವ ಮೊದಲು ಒಂದೇ ದಿನ ಎರಡು ಬಾರಿ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಹಾರಾಷ್ಟ್ರದ ನಾಲ್ವರು ಬಂಡಾಯ ಶಾಸಕರೊಂದಿಗೆ ಶಿಂದೆ ಇಂದು ಬೆಳಗ್ಗೆ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಅವರು ಎಲ್ಲ ಶಾಸಕರೊಂದಿಗೆ ಮಧ್ಯಾಹ್ನ 12.10ಕ್ಕೆ ಕಾಮಾಖ್ಯ ದೇವಸ್ಥಾನಕ್ಕೆ ಮತ್ತೊಮ್ಮೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.
ಬಂಡಾಯ ನಾಯಕ ಏಕನಾಥ್ ಶಿಂದೆ ಇಂದು ಬೆಳಗ್ಗೆ ಕಾಮಾಖ್ಯ ದೇವಸ್ಥಾನದಲ್ಲಿ ದರ್ಶನ ಪಡೆದು ಹೋಟೆಲ್ಗೆ ಮರಳಿದ್ದರು. ಹೋಟೆಲ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ, ಎಲ್ಲ ಬಂಡಾಯ ಶಾಸಕರನ್ನು ಮತ್ತೆ ಕಾಮಾಖ್ಯಕ್ಕೆ ಕರೆದೊಯ್ದರು. ಕಾಮಾಖ್ಯ ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ಶಾಸಕರೆಲ್ಲರೂ ಮತ್ತೆ ಹೋಟೆಲ್ಗೆ ಹಿಂದುರುಗುತ್ತಾರೆ. ಬಳಿಕ ಅಲ್ಲಿಂದ ನೇರ ವಿಮಾನ ನಿಲ್ದಾಣಕ್ಕೆ ತೆರಳಿ ಸಂಜೆ 4 ಗಂಟೆಗೆ ಚಾರ್ಟರ್ಡ್ ವಿಮಾನದ ಮೂಲಕ ಗೋವಾಗೆ ಬಂದಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಬಂಡಾಯ ಶಾಸಕರು ಗೋವಾಕ್ಕೆ ವಾಪಸಾಗುತ್ತಿರುವ ಹಿನ್ನೆಲೆ ಎಲ್‌ಜಿಬಿಐ ವಿಮಾನ ನಿಲ್ದಾಣದಲ್ಲಿ ಭಾರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇಡೀ ಪರಿಸ್ಥಿತಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಗಮನಿಸುತ್ತಿದ್ದಾರೆ.
ಸದನದಲ್ಲಿ ಬಹುಮತ ಸಾಬೀತುಪಡಿಸಲು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ಮಹಾರಾಷ್ಟ್ರ ರಾಜ್ಯಪಾಲರು ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಶಿವಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಂಜೆ 5 ಗಂಟೆಗೆ ಪ್ರಕರಣದ ವಿಚಾರಣೆಗೆ ನ್ಯಾಯಾಲಯದಲ್ಲಿ ನಡೆಯಲಿದೆ.