ರಾಜಮಹೇಂದ್ರವರಂ(ಆಂಧ್ರಪ್ರದೇಶ): ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಗುಜರಾತ್‌ನ ಐಎಎಸ್ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯ(ಇಡಿ) ಸ್ಥಿರಾಸ್ತಿಗಳು, ಬ್ಯಾಂಕ್ ಠೇವಣಿ, ಸ್ಥಿರ ಠೇವಣಿಗಳು ಸೇರಿದಂತೆ 1.55 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿದೆ.
ಕಂಕಿಪತಿ ರಾಜೇಶ್ ಗುಜರಾತ್‌ನ ಸುರೇಂದ್ರನಗರ ಜಿಲ್ಲಾಧಿಕಾರಿಯಾಗಿದ್ದಾರೆ. ಇವರು ಮೂಲತಃ ಆಂಧ್ರಪ್ರದೇಶವರಾಗಿದ್ದಾರೆ. ಉದ್ಯಮಿ ರಫೀಕ್ ಜೊತೆ ಸೇರಿಕೊಂಡು ಅಕ್ರಮವಾಗಿ ಹಣ ಗಳಿಕೆ ಮಾಡಿರುವ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ.
ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂ ಮೂಲದ ಕಂಕಿಪತಿ ರಾಜೇಶ್ 2011ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಗುಜರಾತ್‌ನ ಸುರೇಂದ್ರನಗರದ ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳ ದೂರುಗಳು ಇವರ ಮೇಲೆ ಬಂದಿದ್ದವು. ಗುಜರಾತ್ ಸರ್ಕಾರ ಮೇ ತಿಂಗಳಲ್ಲಿ ಅವರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತ್ತು.
ಸೂರತ್ ಮೂಲದ ಉದ್ಯಮಿ ರಫೀಕ್ ಜೊತೆ ಸೇರಿಕೊಂಡು ಕೋಟ್ಯಂತರ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂದು ಸಿಬಿಐ ವರದಿ ನೀಡಿತ್ತು. ಬಳಿಕ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡು ಆಗಸ್ಟ್ 6 ರಂದು ರಾಜೇಶ್ ಅವರನ್ನು ಬಂಧಿಸಿತ್ತು. ಇದೀಗ ದಾಳಿ ನಡೆಸಿ ರಾಜೇಶ್ ಮತ್ತು ರಫೀಕ್ಗೆ ಸಂಬಂಧಿಸಿದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಂಡಿದೆ.
ಓದಿ: ಎರಡು ಸರ್ಕಾರಿ ಹುದ್ದೆ, ಎರಡೆರಡು ಸಂಬಳ: ಡಬಲ್ ಸ್ಯಾಲರಿ ವಂಚಕನ ಬಣ್ಣ ಬಯಲಾಗಿದ್ದು ಹೇಗೆ?