ಬೆಂಗಳೂರು: ಅಕ್ರಮ ಹಣ ಸಂಪಾದನೆ ಆರೋಪದಲ್ಲಿ ಜಲಮಂಡಳಿ ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ಎಂ. ಬಸವರಾಜು ಎಂಬುವರಿಗೆ ಸೇರಿದ 7.48 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
2018ರಲ್ಲಿ ಲೋಕಾಯುಕ್ತ ಸಂಸ್ಥೆ ಬಸವರಾಜು ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಿತ್ತು. ಸರ್ಕಾರದ ಹುದ್ದೆ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಸ್ಥಿರ ಹಾಗೂ ಚರಾಸ್ತಿಯನ್ನು ತನ್ನ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ ಸಂಪಾದನೆ ಮಾಡಿದ್ದರು.ಇದರಲ್ಲಿ 4.45 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆಹಚ್ಚಿದ್ದರು.
ಈ ಪ್ರಕರಣದ ಹೆಚ್ಚಿನ ತನಿಖೆ ಕೈಗೊಂಡ ಇಡಿ ಅಧಿಕಾರಿಗಳು, ಆರೋಪಿತ ಎಸ್.ಎಂ. ಬಸವರಾಜು ವಿರುದ್ಧ ಮನಿ ಲಾಂಡರಿಂಗ್ ಕಾಯ್ದೆ-2002ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಇದರ ಅನ್ವಯ ಬ್ಯಾಂಕ್‌ನಲ್ಲಿ ಜಪ್ತಿಯಾದ ಹಣ, 3.41 ಕೆಜಿ ಚಿನ್ನ, ವಜ್ರಾಭರಣ ಹಾಗೂ ಬೆಂಗಳೂರು ಮತ್ತು ಮೈಸೂರಿನ ವಿವಿಧ ಸ್ಥಳಗಳಲ್ಲಿ ಬೆಲೆಬಾಳುವ 2 ಸೈಟು, 1 ವಾಣಿಜ್ಯ ಕಟ್ಟಡ, 6 ಪ್ಲ್ಯಾಟ್‌ಗಳು ಸೇರಿದಂತೆ 7.48 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.