ಮುಂಬೈ: ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ್ ಶಿಂಧೆ ಪಾಳೆಯ ನಡುವಿನ ಜಟಾಪಟಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಿವಸೇನೆ ಚಿಹ್ನೆ ಸ್ಥಗಿತಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಸಂಬಂಧ ಶನಿವಾರ ದೃಢ ನಿರ್ಧಾರ ಕೈಗೊಂಡಿದೆ. ಚುನಾವಣಾ ಆಯೋಗದ ನಿರ್ಧಾರದಿಂದ ಈಗ ಆಡಳಿತಾರೂಢ ಸರ್ಕಾರದ ಏಕನಾಥ್ ಶಿಂಧೆ ಬಣ ಅಥವಾ ಉದ್ಧವ್ ಠಾಕ್ರೆ ಬಣವು 'ಬಿಲ್ಲು ಮತ್ತು ಬಾಣ'ದ ಚಿಹ್ನೆಯನ್ನು ಬಳಸಲು ಸಾಧ್ಯವಾಗುವುದಿಲ್ಲ.
ಚುನಾವಣಾ ಆಯೋಗವು ಮಧ್ಯಂತರ ಆದೇಶ ಹೊರಡಿಸಿದ್ದು, ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಶಿವಸೇನೆಗೆ ಮೀಸಲಾಗಿರುವ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ಬಳಸಲು ಎರಡು ಗುಂಪುಗಳಿಗೂ ಅನುಮತಿ ನೀಡಬಾರದು ಎಂದು ಹೇಳಿದೆ. ಪ್ರಸ್ತುತ ಉಪಚುನಾವಣೆಗಳ ಉದ್ದೇಶಗಳಿಗಾಗಿ ಚುನಾವಣಾ ಆಯೋಗವು ಸೂಚಿಸಿರುವ ಉಚಿತ ಚಿಹ್ನೆಗಳ ಪಟ್ಟಿಯಿಂದ ಎರಡೂ ಗುಂಪುಗಳಿಗೆ ವಿಭಿನ್ನ ಚಿಹ್ನೆಗಳನ್ನು ನೀಡಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
ಅಕ್ಟೋಬರ್ 10 ರಂದು ಮಧ್ಯಾಹ್ನ 1 ಗಂಟೆಯೊಳಗೆ ತಮಗೆ ಬೇಕಾದ ಚಿನ್ಹೆಗಳ ಪಟ್ಟಿಯನ್ನು ನೀಡುವಂತೆ ಎರಡೂ ಗುಂಪುಗಳಿಗೆ ಈ ಮೂಲಕ ನಿರ್ದೇಶಿಸಲಾಗಿದೆ ಎಂದು EC ಹೇಳಿದೆ.
ಎರಡೂ ಗುಂಪುಗಳು ಬಯಸಿದಲ್ಲಿ ಅವರ ಮಾತೃಪಕ್ಷದೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಅವರು ಆಯ್ಕೆ ಮಾಡಬಹುದಾದ ವಿಭಿನ್ನ ಮತದಾನ ಚಿಹ್ನೆಗಳನ್ನು ಅವರಿಗೆ ನೀಡಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಚುನಾವಣಾ ಆಯೋಗದ ಈ ನಿರ್ಧಾರದಿಂದ ಉದ್ಧವ್ ಠಾಕ್ರೆ ಬಣ ಮುಂಬೈನ ಅಂಧೇರಿ ಪೂರ್ವದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಬೇರೆ ಹೆಸರು ಮತ್ತು ಚಿಹ್ನೆಯನ್ನು ಬಳಸಬೇಕಾಗುತ್ತದೆ.
ನಿಜವಾದ ಶಿವಸೇನೆ ಯಾರು ಎಂದು ನಿರ್ಧರಿಸದಂತೆ ತಡೆಯುವಂತೆ ಉದ್ದವ್ ಠಾಕ್ರೆ ಬಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಇದನ್ನು ಓದಿ:100 ಕಿಮೀ ವೇಗದಲ್ಲಿ ಚಲಿಸಿ.. ವೀಲ್ಹ್ ಜಾಮ್ ಆಗಿ ನಿಂತ ವಂದೇ ಭಾರತ್ ರೈಲು