ಗೋರಕ್ಪುರ(ಉತ್ತರಪ್ರದೇಶ): ಸಶಸ್ತ್ರ ಸೀಮಾಬಲ (SSB) ಮತ್ತು ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಭಾರತ-ನೇಪಾಳ ಗಡಿಯಲ್ಲಿರುವ ಮಹಾರಾಜಗಂಜ್ ಜಿಲ್ಲೆಯ ಉಗ್ರಾಣವೊಂದರಲ್ಲಿ ಸುಮಾರು 686 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಔಷಧಗಳನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾರಾಜಗಂಜ್ ಜಿಲ್ಲಾಧಿಕಾರಿ ಉಜ್ಜಾವಲ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಪ್ತಾ ಮತ್ತು ಎಸ್‌ಎಸ್‌ಬಿ ಕಮಾಂಡೆಂಟ್ ಮನೋಜ್ ಕುಮಾರ್ ತೂತಿಬಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಯಿಕಾಲಾ ಗ್ರಾಮದಲ್ಲಿ ನಿಷೇಧಿತ ಔಷಧಗಳು ದೊರೆತಿವೆ ಎಂದರು.
ಪ್ರಕರಣ ಸಂಬಂಧ ರಮೇಶ್ ಕುಮಾರ್ ಗುಪ್ತಾ (55) ಎಂಬಾತನನ್ನು ಬಂಧಿಸಲಾಗಿದೆ. ಗೋವಿಂದ ಗುಪ್ತಾ ಎಂದು ಗುರುತಿಸಲಾಗಿರುವ ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ನಿಷೇಧಿತ ಔಷಧಿಗಳನ್ನು ಗುಪ್ತಾ ನಿವಾಸದ ಒಳಗೆ ನಿರ್ಮಿಸಿದ ಗೋದಾಮಿನಲ್ಲಿ ಸಂಗ್ರಹಿಸಿ, ನೇಪಾಳಕ್ಕೆ ಕಳುಹಿಸಲು ಪ್ರಯತ್ನ ನಡೆದಿತ್ತು. ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್, ಕಾಪಿರೈಟ್ ಆಕ್ಟ್ ಮತ್ತು ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಉಗ್ರಾಣದಲ್ಲಿ ಸಿಕ್ಕಿದ್ದು ಸೈಕೋಟ್ರೋಪಿಕ್ ಡ್ರಗ್ಸ್ ಎಂದು ಹೇಳಲಾಗುತ್ತಿದೆ. ಈ ಔಷಧಗಳನ್ನು ವ್ಯಕ್ತಿಯ ಮನಸ್ಥಿತಿ ಬದಲಾಯಿಸಲು ಮತ್ತು ಭಾವನೆಗಳಲ್ಲಿ ಬದಲಾವಣೆ ತರಲು ಬಳಸಲಾಗುತ್ತದೆ. ಇನ್ನು 104 ಚುಚ್ಚುಮದ್ದು, 18,782 ಸಿರಪ್ ಬಾಟಲಿಗಳು, 3,13,384 ಕ್ಯಾಪ್ಸೂಲ್‌ಗಳು, 1,24,897 ಮಾತ್ರೆಗಳು ಮತ್ತು 1,34,460 ಬೆಲೆಯ ಲೇಬಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
"ಜಿಲ್ಲೆಯಲ್ಲಿ ಅಕ್ರಮ ಡ್ರಗ್ಸ್ ವ್ಯಾಪಾರದ ವಿರುದ್ಧ ಸಿಕ್ಕ ಒಂದು ದೊಡ್ಡ ಯಶಸ್ಸು ಇದು. ಇಡೀ ಪೊಲೀಸರ ತಂಡವು ಶ್ಲಾಘನೀಯ ಕೆಲಸ ಮಾಡಿದೆ. ತನಿಖೆಯ ಸಮಯದಲ್ಲಿ ಗ್ಯಾಂಗ್ ನೇಪಾಳಕ್ಕೆ ಡ್ರಗ್ಸ್ ಕಳುಹಿಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಕುಮಾರ್ ಹೇಳಿದರು.
ಇದನ್ನೂ ಓದಿ: ದೇಶದ ಮೊದಲ ಸ್ವದೇಶಿ ವಿಮಾನವಾಹಕ INS ವಿಕ್ರಾಂತ್ ಪರೀಕ್ಷಾರ್ಥ ಸಂಚಾರ- ವಿಡಿಯೋ