ನವದೆಹಲಿ : ಕಚ್ಚಾತೈಲ ಹೊತ್ತು ಸಾಗಿಸುತ್ತಿದ್ದ ಇಸ್ರೇಲ್ ನಿರ್ಮಿತ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, ಗುಜರಾತ್ ಬಂದರಿನ ಸಮೀಪ ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೀಡಾಗಿದೆ. ಭಾರತೀಯ ನೌಕಾಪಡೆ ರಕ್ಷಣೆಗೆ ಧಾವಿಸಿದೆ ಎಂದು ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ತಿಳಿಸಿದೆ.
ಇಸ್ರೇಲ್‌ನೊಂದಿಗೆ ಸೇರಿ ನಿರ್ಮಿಸಲಾದ 'ಎಂವಿ ಕೆಮ್ ಪ್ಲುಟೊ' ಎಂಬ ವ್ಯಾಪಾರಿ ನೌಕೆಗೆ ಶನಿವಾರ ಡ್ರೋನ್ ಬಂದಪ್ಪಳಿಸಿದೆ. ಭಾರತದ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಹಡಗಿನ ಮೇಲೆ ಡ್ರೋನ್ ದಾಳಿಯಾಗಿದ್ದರಿಂದ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಯುಕೆಎಂಟಿಒ ತಿಳಿಸಿದೆ.
ಗುಜರಾತ್ನ ಸೋಮನಾಥ್ ಜಿಲ್ಲೆಯ ವೆರಾವಲ್‌ನಿಂದ 200 ನಾಟಿಕಲ್ ಮೈಲಿ (ಸುಮಾರು 370 ಕಿಮೀ) ದೂರದಲ್ಲಿದ್ದ ಹಡಗಿನ ಮೇಲೆ ಮಾನವರಹಿತ ಈ ವೈಮಾನಿಕ ದಾಳಿಯು ನಡೆದಿದೆ. ಹಡಗಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದ್ದು, ಸುಮಾರು 20 ಭಾರತೀಯರು ಸೇರಿದಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭಾರತೀಯ ಹಡಗು ಸೇರಿದಂತೆ ಎಂವಿ ಕೆಮ್ ಫ್ಲುಟೊ ವಾಪಸ್ ಬಂದರಿಗೆ ಬರುತ್ತಿವೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್, ಹಡಗಿನ ಮೇಲೆ ಅನ್‌ಕ್ರೂಡ್ ಏರಿಯಲ್ ಸಿಸ್ಟಮ್ (UAS)ನಿಂದ ದಾಳಿ ನಡೆಸಲಾಗಿದೆ. ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನೌಕೆಗಳನ್ನು ಎಚ್ಚರಿಕೆಯಿಂದ ಮುನ್ನಡೆಸಲಾಗುತ್ತಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಲು ಸಲಹೆ ನೀಡಲಾಗಿದೆ ಎಂದು ತಿಳಿಸಿದೆ.
ರಕ್ಷಣೆಗೆ ಧಾವಿಸಿದ ಭಾರತೀಯ ನೌಕಾಪಡೆ: ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಹಡಗುಗಳು ದಾಳಿಗೊಳಗಾದ ಹಡಗಿನ ನೆರವಿಗೆ ಧಾವಿಸಿವೆ. ಭಾರತೀಯ ಕೋಸ್ಟ್ ಗಾರ್ಡ್ ಡಾರ್ನಿಯರ್ ಕಡಲ ಕಣ್ಗಾವಲು ವಿಮಾನವು ತೊಂದರೆಗೀಡಾದ ಹಡಗಿನೊಂದಿಗೆ ಸಂಪರ್ಕ ಸಾಧಿಸಿತು. ಡ್ರೋನ್ ದಾಳಿಯ ನಂತರ, ಹಡಗು ತನ್ನ ಸ್ವಯಂಚಾಲಿತ ವ್ಯವಸ್ಥೆಯನ್ನು ಬದಲಿಸಿತು. ಹಡಗಿನಲ್ಲಿ ವಿದ್ಯುತ್ ಉತ್ಪಾದನಾ ವ್ಯವಸ್ಥೆಯು ಸದ್ಯ ಕಾರ್ಯನಿರ್ವಹಿಸುತ್ತಿದೆ. ಅದು ಗಮ್ಯಸ್ಥಾನಕ್ಕೆ ಹೊರಡುವ ಮೊದಲು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದರು.
ಇದಕ್ಕೂ ಮೊದಲು, P-8ಐ ಕಡಲ ಕಣ್ಗಾವಲು ವಿಮಾನವು ಗೋವಾದ ಐಎನ್ಎಸ್ ಹಂಸಾ ನೌಕಾ ನೆಲೆಯಿಂದ ಟೇಕಾಫ್ ಆಗಿ, ತೊಂದರೆಗೀಡಾದ ಹಡಗಿನೊಂದಿಗೆ ಸಂವಹನ ಸಾಧಿಸಿತು. ಭಾರತೀಯ ನೌಕಾಪಡೆಯ ಯುದ್ಧನೌಕೆ ಕೂಡ ದಾಳಿಗೀಡಾದ ಹಡಗಿನ ಕಡೆಗೆ ಚಲಿಸುತ್ತಿದೆ. ಮುಂದಿನ ಕೆಲವೇ ಗಂಟೆಗಳಲ್ಲಿ ವ್ಯಾಪಾರಿ ಹಡಗನ್ನು ತಲುಪುವ ನಿರೀಕ್ಷೆಯಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದರು.
ದಾಳಿಗೀಡಾದ ಹಡಗು ಕಚ್ಚಾ ತೈಲವನ್ನು ಹೊತ್ತು ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರು ಬಂದರಿನ ಕಡೆಗೆ ಹೋಗುತ್ತಿತ್ತು ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: 6 ವರ್ಷಗಳ ಕಾಲ ಬರಿಗಾಲಲ್ಲೇ ಓಡಾಡಿದ ಮಧ್ಯಪ್ರದೇಶದ ಬಿಜೆಪಿ ನಾಯಕ: ಕಾರಣ ಏನು ಗೊತ್ತಾ?