ಕೊಟ್ಟಾಯಂ (ಕೇರಳ): ಮೂರು ಡೋಸ್ ರೇಬಿಸ್ ನಿರೋಧಕ ಲಸಿಕೆ ಪಡೆದಿದ್ದರೂ ಕೇರಳದಲ್ಲಿ 12 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಇದು ಲಸಿಕೆಯ ಗುಣಮಟ್ಟದ ಮೇಲೆಯೇ ಅನುಮಾನ ಹುಟ್ಟುಹಾಕಿದ್ದು, ಸರ್ಕಾರ ಈ ಬಗ್ಗೆ ಪರೀಕ್ಷಿಸಲು ಸಮಿತಿ ರಚನೆಗೆ ಮುಂದಾಗಿದೆ.
ಕೆಲ ದಿನಗಳ ಹಿಂದೆ ಬೀದಿನಾಯಿಯೊಂದು 12 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಕಚ್ಚಿತ್ತು. ಬಳಿಕ ಆಕೆಗೆ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಯ ವೇಳೆ ಬಾಲಕಿಗೆ ಮೂರು ಡೋಸ್ ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದೆ. ಆದರೂ ಮಗು ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದೆ.
ರೇಬಿಸ್ ಲಸಿಕೆ ಗುಣಮಟ್ಟದ ಮೇಲೆ ಶಂಕೆ: ಕೇರಳದಲ್ಲಿ ರೇಬಿಸ್ ಲಸಿಕೆ ಪಡೆದುಕೊಂಡರೂ ನಾಯಿ ಕಡಿತಕ್ಕೊಳಗಾದವರು ಮೃತಪಡುತ್ತಿದ್ದಾರೆ. ಇದು ಆತಂಕದ ವಿಷಯವಾಗಿದ್ದು, ಲಸಿಕೆಯ ದೃಢತೆಯ ಮೇಲೆಯೇ ಅನುಮಾನ ಮೂಡಿಸಿದೆ.
ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಪಿಣರಾಯಿ ಅವರು ಕೂಡ ಲಸಿಕೆಯ ಗುಣಮಟ್ಟದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದರು. ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಆ್ಯಂಟಿ ರೇಬಿಸ್ ಲಸಿಕೆಯ ಗುಣಮಟ್ಟವನ್ನು ಪರೀಕ್ಷಿಸಲು ಸರ್ಕಾರ ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಹೇಳಲಾಗಿದೆ.