ಕೇರಳ: ಶಸ್ತ್ರಚಿಕಿತ್ಸೆ ಮಾಡುವ ವೇಳೆ ವೈದ್ಯರು ರೋಗಿಯ ಹೊಟ್ಟೆಯಲ್ಲೇ ಕತ್ತರಿ ಮತ್ತಿತರ ವಸ್ತುಗಳನ್ನು ಬಿಟ್ಟು ಸಮಸ್ಯೆ ಉಂಟು ಮಾಡಿದ ಘಟನೆಗಳು ವರದಿಯಾಗಿದ್ದು ನೋಡಿದ್ದೇವೆ. ಅಂಥದ್ದೇ ಘಟನೆಯೊಂದು ಕೇರಳದಲ್ಲಿ ಮತ್ತೆ ಬೆಳಕಿಗೆ ಬಂದಿದೆ. 5 ವರ್ಷಗಳ ಹಿಂದೆ ನಡೆದ ಆಪರೇಷನ್ ವೇಳೆ ಮಹಿಳೆಯ ಹೊಟ್ಟೆಯಲ್ಲಿ ವೈದ್ಯರು ಕತ್ತರಿ ಬಿಟ್ಟಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಗೆ ಈಗ ಮತ್ತೆ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಹೊರತೆಗೆಯಲಾಗಿದೆ.
ಕೇರಳದ ಕೋಝಿಕ್ಕೋಡ್ನ ಹರ್ಷಿನಾ ಎಂಬ ಮಹಿಳೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು. 5 ವರ್ಷಗಳಿಂದ ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. 2017 ರಲ್ಲಿ ಇವರಿಗೆ ಹೆರಿಗೆ ವೇಳೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮೊದಮೊದಲು ಹೊಟ್ಟೆನೋವಿಗೆ ಈ ಆಪರೇಷನ್ ಕಾರಣ ಎಂದು ಭಾವಿಸಿದ್ದರು. ಬಳಿಕ ನೋವು ಅಧಿಕವಾದ ಕಾರಣ ಅವರು ಮತ್ತೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದರು.
5 ವರ್ಷದಿಂದ ನೋವು ತಗ್ಗದ ಕಾರಣ ಮಹಿಳೆ ಸ್ಕ್ಯಾನ್ ಮಾಡಿಸಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿ ಲೋಹದ ವಸ್ತುವೊಂದು ಕಂಡುಬಂದಿದೆ. ಬಳಿಕ ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಪತ್ತೆಯಾಗಿದ್ದು, ಅದನ್ನು ಈಗ ಹೊರತೆಗೆಯಲಾಗಿದೆ. ಇದು ವೈದ್ಯರಲ್ಲೇ ಅಚ್ಚರಿ ಮೂಡಿಸಿದೆ. 2017 ರಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ಈ ಘಟನೆ ನಡೆದಿದೆ ಎಂದು ಮಹಿಳೆ ತಿಳಿಸಿದ್ದಾರೆ.
ಓದಿ: ಮಗನಿಗೆ ಕಚ್ಚಿದ ಎರಡು ಸರ್ಪಗಳು: ಚಿಕಿತ್ಸೆ ಕೊಡಿಸಲು ಹಾವುಗಳ ಸಮೇತ ಆಸ್ಪತ್ರೆಗೆ ಬಂದ ತಂದೆ