ಹೈದರಾಬಾದ್ (ತೆಲಂಗಾಣ): ಆಂಧ್ರ ಪ್ರದೇಶದ ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಕಡಪ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಸಂಸದ ಅವಿನಾಶ್ ರೆಡ್ಡಿ ವಿರುದ್ಧ ಮೇ 31ರವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ತೆಲಂಗಾಣ ಹೈಕೋರ್ಟ್ ಶನಿವಾರ ಮಧ್ಯಂತರ ಆದೇಶ ಹೊರಡಿಸಿದೆ.
ವಿವೇಕಾನಂದ ರೆಡ್ಡಿ ಅವರ ಸಹೋದರನ ಪುತ್ರರಾಗಿರುವ ಅವಿನಾಶ್ ರೆಡ್ಡಿ ಈ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ ತಂದೆ ಭಾಸ್ಕರ್ ರೆಡ್ಡಿ ಹಾಗೂ ಮತ್ತೊಬ್ಬ ಆರೋಪಿ ಉದಯ್ ಕುಮಾರ್ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಅವಿನಾಶ್ ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ರಜಾ ಕಾಲದ ಪೀಠದ ನ್ಯಾಯಾಧೀಶ ನ್ಯಾಯಮೂರ್ತಿ ಎಂ.ಲಕ್ಷ್ಮಣ್ ವಿಚಾರಣೆ ನಡೆಸಿದರು. ನಿನ್ನೆ ಮತ್ತು ಇಂದು ವಾದ - ಪ್ರತಿವಾದ ಆಲಿಸಿದ ಪೀಠವು ಅವಿನಾಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಇದೇ 31ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಕಠಿಣ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಿತು.
ಕೋರ್ಟ್ನಲ್ಲಿ ವಾದ ಮಂಡನೆ: ಶುಕ್ರವಾರ ಸಂಸದ ಅವಿನಾಶ್ ರೆಡ್ಡಿ ಮತ್ತು ವಿವೇಕಾನಂದ ಅವರ ಪುತ್ರಿ ಸುನೀತಾ ಪರ ವಕೀಲರು ವಾದ ಮಂಡಿಸಿದ್ದರು. ಇಂದು ಸಿಬಿಐ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನಿಲ್ ವಾದ ಮಂಡಿಸಿದರು. ''ಅವಿನಾಶ್ ರೆಡ್ಡಿ ತನಿಖೆಗೆ ಸಹಕರಿಸುತ್ತಿಲ್ಲ. ಮೊದಲಿನಿಂದಲೂ ಪ್ರಕರಣದ ತನಿಖೆಗೆ ಪ್ರತಿ ಹಂತದಲ್ಲೂ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ. ಪ್ರತಿ ಬಾರಿ ನೋಟಿಸ್ ನೀಡಿದರೂ ಯಾವುದೋ ಕಾರಣ ನೀಡಿ ವಿಚಾರಣೆಗೆ ಹಾಜರಾಗುವುದಿಲ್ಲ. ನ್ಯಾಯಾಲಯಗಳಲ್ಲಿ ವಿವಿಧ ಅರ್ಜಿಗಳನ್ನು ಸಲ್ಲಿಸಿ ತನಿಖೆ ವಿಳಂಬ ಮಾಡುವ ಮೂಲಕ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ'' ಎಂದು ನ್ಯಾಯ ಪೀಠದ ಗಮನಕ್ಕೆ ತಂದರು.
ಆಗ ಸಾಮಾನ್ಯ ಪ್ರಕರಣಗಳಲ್ಲೂ ಕೂಡ ಇಷ್ಟು ಸಮಯ ತೆಗೆದುಕೊಳ್ಳುತ್ತದೆಯೇ?, ವಿವೇಕಾನಂದ ಹತ್ಯೆಗೆ ಹಲವು ಕಾರಣಗಳಿವೆ ಎನ್ನುತ್ತಿದ್ದಿರಿ.. ಮುಖ್ಯ ಕಾರಣವೇನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ''ಕೊಲೆ ನಡೆಯುವ ಒಂದು ತಿಂಗಳ ಹಿಂದೆಯೇ ಸಂಚು ಆರಂಭವಾಗಿತ್ತು. ಅವಿನಾಶ್ ಕುಟುಂಬಕ್ಕೆ ವಿವೇಕಾನಂದ ಜತೆ ರಾಜಕೀಯ ಭಿನ್ನಾಭಿಪ್ರಾಯವಿದೆ. ವಿಜಯಮ್ಮ ಅಥವಾ ಶರ್ಮಿಳಾ (ಎಪಿ ಸಿಎಂ ಜಗನ್ ತಾಯಿ ಅಥವಾ ಜಗನ್ ಸಹೋದರಿ) ಅವರಿಗೆ ಕಡಪ ಎಂಪಿ ಟಿಕೆಟ್ ನೀಡುವಂತೆ ವಿವೇಕಾ ಕೇಳಿದ್ದರು. ಆದರೆ, ಅವಿನಾಶ್ ವಿವೇಕಾನಂದ ಮೇಲೆ ರಾಜಕೀಯವಾಗಿ ಮೇಲುಗೈ ಸಾಧಿಸಲು ಬಯಸಿದ್ದರು'' ಎಂದು ತಿಳಿಸಿದರು.
ಸಾಕ್ಷಿದಾರರು ಮುಂದೆ ಬರುತ್ತಿಲ್ಲ - ಸಿಬಿಐ: ಈ ವೇಳೆ ಭಾಸ್ಕರ್ ರೆಡ್ಡಿ ಮತ್ತು ಉದಯ್ ಕುಮಾರ್ ರೆಡ್ಡಿ ಬಂಧನಕ್ಕೆ ಕಾರಣಗಳೇನು ಎಂದು ನ್ಯಾಯ ಪೀಠ ಕೇಳಿತು. ಇದಕ್ಕೆ ಉತ್ತರಿಸಿದ ಸಿಬಿಐ ಪರ ವಕೀಲರು, "ಭಾಸ್ಕರ್ ರೆಡ್ಡಿ ಮತ್ತು ಉದಯಕುಮಾರ್ ರೆಡ್ಡಿ ಸಂಚಿನಲ್ಲಿ ಶಾಮೀಲಾಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬಂಧಿಸಿದ್ದೇವೆ. ಅವರಿಬ್ಬರೂ ಕಸ್ಟಡಿ ವಿಚಾರಣೆಗೆ ಸಹಕರಿಸುತ್ತಿಲ್ಲ. ಅವಿನಾಶ್ ಸಂಚನ್ನು ಕಾರ್ಯಗತಗೊಳಿಸಿದ್ದು ಶಿವಶಂಕರರೆಡ್ಡಿ ಮತ್ತು ಗಂಗಿರೆಡ್ಡಿ. ಇಲ್ಲಿ ಶತ್ರುವಿನ ಮಿತ್ರನೇ ಶತ್ರು ಎಂಬ ನೀತಿಯನ್ನು ಅನುಸರಿಸಲಾಗಿದೆ. ಅಲ್ಲದೇ, ಅವಿನಾಶ್ ರೆಡ್ಡಿಯಿಂದ ಹಣ ಬಂದಿದೆ ಎಂದು ಬಂಧಿತರು ಹೇಳಿದ್ದಾರೆ. ಅವಿನಾಶ್ ಈ ಹಣವನ್ನು ಶಿವಶಂಕರರೆಡ್ಡಿಗೆ ಕೊಟ್ಟರೆ, ಶಿವಶಂಕರ್ ಗಂಗಿರೆಡ್ಡಿಗೆ ತಲುಪಿಸಿದ್ದರು'' ಎಂದು ವಾದ ಮಂಡಿಸಿದರು.
ಮುಂದುವರೆದು, ''ಅವಿನಾಶ್ ತನ್ನ ಹಿಂಬಾಲಕರ ಮೂಲಕ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅವಿನಾಶ್ ರೆಡ್ಡಿಯಿಂದಾಗಿ ಸಾಕ್ಷಿದಾರರು ಮುಂದೆ ಬರುತ್ತಿಲ್ಲ. ಕೆಲವು ಪ್ರಮುಖ ಸಾಕ್ಷಿ ಹೇಳಿಕೆಗಳಿವೆ. ಸಾಕ್ಷಿಗಳ ಹೇಳಿಕೆಗಳನ್ನು ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಈ ಹಂತದಲ್ಲಿ ಸಾಕ್ಷಿಗಳ ವಿವರಗಳನ್ನು ಬಹಿರಂಗಪಡಿಸಿದರೆ ಅವರ ಜೀವಕ್ಕೆ ಅಪಾಯವಿದೆ'' ಎಂದು ಸಿಬಿಐ ವಕೀಲರು ಹೇಳಿದರು.
ಇದನ್ನೂ ಓದಿ: ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಕೇಸ್: ತಾಯಿಯ ಅನಾರೋಗ್ಯದ ಕಾರಣ ನೀಡಿ ಸಿಬಿಐ ವಿಚಾರಣೆಗೆ ಕಡಪ ಸಂಸದ ಗೈರು