ಹಿಮಾಚಲ ಪ್ರದೇಶ: ರಾಜ್ಯದ ಸಿರ್ಮೌರ್ ಜಿಲ್ಲೆಯಲ್ಲಿ ದೀಪಾವಳಿ ಸಿದ್ಧತೆಗಳು ಭರದಿಂದ ಸಾಗಿವೆ. ದೀಪಾವಳಿ ಎಂದರೆ ಸಾಕು ನೆನಪಾಗೋದು ಹಣತೆಗಳು. ಬಗೆ ಬಗೆಯ ಚೀನೀ ಹಣತೆಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಆದರೆ ಭಾರತದ ಸಂಪ್ರದಾಯದಂತೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದೇ ಶ್ರೇಷ್ಠ.
ಸಿರ್ಮೌರ್‌ನಲ್ಲಿ ಹಸುವಿನ ಸಗಣಿ ಬಳಸಿ ಹಣತೆಗಳನ್ನು ತಯಾರಿಸಲಾಗುತ್ತಿದೆ. ಇದು ಹಲವಾರು ಮಹಿಳೆಯರಿಗೆ ಉದ್ಯೋಗ ದೊಕಿಸಿಕೊಟ್ಟಿದ್ದು, ಆತ್ಮನಿರ್ಭರ ಭಾರತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪಶುಸಂಗೋಪನಾ ಇಲಾಖೆ ಮತ್ತು ಜಿಲ್ಲಾಡಳಿತ ಈ ಪ್ರಯತ್ನ ಮಾಡುತ್ತಿದೆ.
ನಹಾನ್ ಬಳಿಯ ಬಾಲಸುಂದರಿ ಗೌಸಡಾನ್ ನಲ್ಲಿ ಮಹಿಳೆಯರಿಗೆ ಹಸುವಿನ ಸಗಣಿಯಿಂದ ಹಣತೆಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತಿದೆ. ಇದರಿಂದ ಅವರಿಗೆ ಉದ್ಯೋಗ ಸಿಗುತ್ತದೆ ಮತ್ತು ಮಹಿಳೆಯರು ಕೂಡ ಈ ಕೆಲಸದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಅಲ್ಲದೇ ಅವರು ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಬಹುದಾಗಿದೆ.
ಜಿಲ್ಲಾಡಳಿತದ ಈ ಕಾರ್ಯಾಗಾರದಲ್ಲಿ ಪ್ರಸ್ತುತ 10 ರಿಂದ 12 ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಮುಗಿದ ಬಳಿಕ ಇವರು ತಮ್ಮ ಸ್ವಉದ್ಯೋಗ ಕಂಡುಕೊಳ್ಳಬಹುದಾಗಿದೆ. ಹಸುಗಳ ಸಗಣಿಯಿಂದ ತಯಾರಿಸಬಹುದಾದ ಈ ದೀಪಗಳಲ್ಲಿ ಜಿಲ್ಲಾಡಳಿತವು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡಿದೆ. ಈ ಅಭಿಯಾನದ ಮೂಲಕ ಜಿಲ್ಲಾಡಳಿತವು ಸ್ವಾವಲಂಬಿ ಭಾರತದ ಕನಸಿನೆಡೆಗೆ ಸಾಗಲು ಯತ್ನಿಸುತ್ತಿದೆ. ಅಲ್ಲದೇ ರಸ್ತೆಯಲ್ಲಿ ತಿರುಗಾಡುವ ದಾರಿತಪ್ಪಿದ ಹಸುಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹ ಸಾಧ್ಯವಾಗುತ್ತಿದೆ.
ರಸ್ತೆಗಳಲ್ಲಿ ಓಡಾಡುವ ಬಿಡಾಡಿ ದನಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವುದು ಪ್ರತಿ ರಾಜ್ಯದ ಸಮಸ್ಯೆಯಾಗಿದೆ. ಹಸುವಿನ ಸಗಣಿಗಳಿಂದ ದೀಪ ಮಾಡುವ ಈ ಆಲೋಚನೆಯು ತಮ್ಮ ಹಸುಗಳನ್ನು ಮನೆಯಿಂದ ಹೊರಗೆ ಓಡಿಸುವ ಜನರಿಗೆ ಹಣ ಸಂಪಾದಿಸುವ ಸಾಧನವಾಗಲಿದೆ. ಇದರಿಂದ ಬಿಡಾಡಿ ದನಗಳ ಸಂಖ್ಯೆಯಲ್ಲಿ ಸಹ ಇಳಿಕೆ ಕಂಡು ಬರಬಹುದಾಗಿದೆ.
ಈ ಮೂಲಕ ಹಸುವಿನ ಸಗಣಿ ಅನೇಕ ಸಮಸ್ಯೆಗಳಿಗೆ ಪರಿಹಾರವೆಂದು ಮತ್ತೊಮ್ಮೆ ಸಾಬೀತಾದಂತಾಗಿದೆ. ಬರುವ ದೀಪಾವಳಿಗೆ ಸಗಣಿಯ ಹಣತೆಗಳಲ್ಲಿ ದೀಪ ಬೆಳಗಿಸಿ ಪರಿಸರ ಸ್ನೇಹಿ ಹಬ್ಬ ಆಚರಿಸುವುದಲ್ಲದೇ, ಈ ಮಹಿಳೆಯರ ಜೀವನದಲ್ಲಿ ಸಹ ಸ್ವಾವಲಂಬನೆಯ ಬೆಳಕು ತರಲಿ ಎಂಬುದು ಎಲ್ಲರ ಆಶಯ.