ಬೆಂಗಳೂರು: ಚಂದನವನದ ಚೆಲುವೆ ರಾಧಿಕಾ ಕುಮಾರಸ್ವಾಮಿ ಅವರ ಬಹುನಿರೀಕ್ಷಿತ 'ಭೈರಾದೇವಿ' ಗುರುವಾರ ಅದ್ಧೂರಿಯಾಗಿ ತೆರೆಗಪ್ಪಳಿಸಿದ್ದು, ಬಹುತೇಕ ಮೆಚ್ಚುಗೆ ಸಂಪಾದಿಸಿದೆ. ''ನನ್ನ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗದೇ ಇದ್ದರೆ ನಾನು ಮತ್ತೆ ಸಿನಿಮಾ ಮಾಡೋಲ್ಲ'' ಅಂತಾ ರಾಧಿಕಾ ಹೇಳಿದ್ದರು. ಶುಭ ಸುದ್ದಿ ಎಂಬಂತೆ ಹೆಚ್ಚಿನ ಸಂಖ್ಯೆಯ ಸಿನಿಪ್ರೇಕ್ಷಕರು 'ಭೈರಾದೇವಿ'ಯನ್ನು ಮೆಚ್ಚಿದ್ದಾರೆ.
ಹೌದು, ಹಾರರ್ ಜೊತೆಗೆ ಸಸ್ಪೆನ್ಸ್ ಕಥೆ ಆಧರಿಸಿ ಬಂದ ಭೈರಾದೇವಿ ಗುರುವಾರ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಸಿನಿಪ್ರೇಮಿಗಳಿಂದ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಭೈರಾದೇವಿ ಸಿನಿಮಾ ಶಿವಭಕ್ತರು ಆಗಿರುವ ಅಘೋರಿ ಹಾಗೂ ಸಾವನ್ನಪ್ಪಿರುವ ಆತ್ಮದ ನಡುವೆ ನಡೆಯುವ ಸಂಘರ್ಷದ ಕಥೆ.
ಪೊಲೀಸ್ ಅಧಿಕಾರಿ ರಮೇಶ್ ಅರವಿಂದ್ ಎಂಟ್ರಿಯಿಂದ ಶುರುವಾಗುವ ಭೈರಾದೇವಿ ಪಕ್ಕಾ ಹಾರರ್ ಸಿನಿಮಾ. ಈ ಪೊಲೀಸ್ ಅಧಿಕಾರಿಗೆ ಗೊತ್ತಿಲ್ಲದ ಒಂದು ಆತ್ಮ ಅವರಿಗೆ ಹಾಗೂ ಶಾಲೆಯಲ್ಲಿ ಓದುತ್ತಿರುವ ಮಗಳಿಗೆ ಕಾಡುತ್ತಿರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅಘೋರಿಯ ಮೊರೆ ಹೋಗ್ತಾರೆ.
ಕಾಶಿಯಲ್ಲಿರುವ ಅಘೋರಿ ಭೈರಾದೇವಿ ಅಂದ್ರೆ ರಾಧಿಕಾ ಕುಮಾರಸ್ವಾಮಿಯ ಎಂಟ್ರಿ ಈ ವೇಳೆ ಆಗುತ್ತದೆ. ರಮೇಶ್ ಅರವಿಂದ್ಗೆ ಕಾಡುತ್ತಿರುವ ಆ ಆತ್ಮ ಯಾವುದು? ಕಾಡುತ್ತಿರೋದಕ್ಕೆ ಕಾರಣವೇನು? ಆ ಆತ್ಮಕ್ಕೆ ಮುಕ್ತಿ ಸಿಗುತ್ತಾ? ಅನ್ನೋದು ಚಿತ್ರದ ಕಥೆ.
ಭೈರಾದೇವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ತಾರೆ. ಭೈರಾದೇವಿ, ಕಾಳಿ ಅವತಾರದಲ್ಲಿ ನಟಿಯ ನಟನೆ ಅತ್ಯುತ್ತಮವಾಗಿ ಮೂಡಿಬಂದಿದೆ. ಅನು ಪ್ರಭಾಕರ್ ರಮೇಶ್ ಪತ್ನಿಯಾಗಿ ಗಮನ ಸೆಳೆಯುತ್ತಾರೆ. ಅಘೋರಿ ಪಾತ್ರದಲ್ಲಿ ರವಿಶಂಕರ್, ಕಾಶಿ ಪಂಡಿತರ ಪಾತ್ರದಲ್ಲಿ ಹಿರಿಯ ನಟ ಶಿವರಾಮ್ ಹಾಗು ಕಾಮಿಡಿ ಪಾತ್ರದಲ್ಲಿ ರಂಗಾಯಣ ರಘು ಅಭಿನಯ ಗಮನ ಸೆಳೆಯುತ್ತದೆ.
ಸಂಗೀತ ನಿರ್ದೇಶಕ ಕೆ.ಕೆ.ಸೆಂಥಿಲ್ ಪ್ರಸಾದ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಜೆ.ಎಸ್.ವಾಲಿ ಛಾಯಾಗ್ರಹಣ ಸಿನಿಮಾಗೆ ಪೂರಕವಾಗಿದೆ. ಈ ಹಿಂದೆ ಆರ್ ಎಕ್ಸ್ ಸೂರಿಯಂಥ ಮಾಸ್ ಸಿನಿಮಾ ಮಾಡಿದ್ದ ನಿರ್ದೇಶಕ ಶ್ರೀ ಜೈ ಮೊದಲಾರ್ಧದಲ್ಲಿ ಗಟ್ಟಿ ಕಥೆ ಹೇಳುವಲ್ಲಿ ಗೆದ್ದಿದ್ದಾರೆ. ನವರಾತ್ರಿ ಸಂದರ್ಭ ಬಿಡುಗಡೆ ಆಗಿರುವ ಭೈರಾದೇವಿ ಸಖತ್ ಸದ್ದು ಮಾಡುವಲ್ಲಿ ಯಶ ಕಂಡಿದೆ.
ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚಗೆ ಹೆಣ್ಣು ಮಗು ಜನನ: ಭುವನ್ ಕಂದಮ್ಮನ ಹೆಸರೇನು ಗೊತ್ತಾ? - Harshika Bhuvann Baby
ಹಾರರ್ ಜೊತೆಗೆ ಥ್ರಿಲ್ಲಿಂಗ್ ಎಲಿಮೆಂಟ್ಸ್ ಹೊಂದಿರುವ ಭೈರಾದೇವಿ ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಕೆ.ಜಿ.ರಸ್ತೆಯಲ್ಲಿರುವ ತ್ರಿವೇಣಿ ಚಿತ್ರಮಂದಿರಕ್ಕೆ ಫಸ್ಟ್ ಶೋ ನೋಡಲು ರಾಧಿಕಾ ಕುಮಾರಸ್ವಾಮಿ, ನಟಿ ಅನು ಪ್ರಭಾಕರ್, ನಿರ್ದೇಶಕ ಶ್ರೀ ಜೈ ಹಾಗೂ ನಿರ್ಮಾಪಕ ರವಿರಾಜ್ ಆಗಮಿಸಿದ್ದರು. ಪ್ರೇಕ್ಷಕರೊಂದಿಗೆ ಸಮಯ ಕಳೆದು, ಸಖತ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.