ರಾಯಚೂರು: "ಜನಾರ್ದನ ರೆಡ್ಡಿ ಲೂಟಿ ಮಾಡಿ ಜೈಲಿಗೆ ಹೋಗಿ ಬಂದು, ಈಗ ಶಾಸಕರಾಗಿದ್ದಾರೆ. ಅವರನ್ನು ಪಕ್ಷದಿಂದ ಯಾಕೆ ಹೊರ ಹಾಕಿದ್ರು ಎನ್ನುವುದು ಇಡೀ ರಾಜ್ಯ, ರಾಷ್ಟಕ್ಕೆ ಗೊತ್ತು. ಅವರನ್ನು ಪಕ್ಷದಿಂದ ಹೊರಗೆ ಹಾಕಿದ್ದು ಯಾರು? ನಾವಾ?. ಬಿಜೆಪಿಯವರು ಹೊರ ಹಾಕಿದ್ದು. ಈಗ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೀಗೆ ಮಾತನಾಡ್ತಿದ್ದಾರೆ ಅಷ್ಟೇ" ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ವಾಗ್ದಾಳಿ ನಡೆಸಿದರು.
ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯನವರ ಪತ್ನಿ ಮನನೊಂದು ಆತ್ಮಸಾಕ್ಷಿಯಾಗಿ ನಿವೇಶನಗಳನ್ನು ಮರಳಿಸಿದ್ದಾರೆ. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಗೆ ಹಿಂತಿರುಗಿಸಿದ್ರು ಅಂತ ಕೇಳುತ್ತಾರೆ. ಆರ್.ಅಶೋಕ್ ಅವರನ್ನು ಕೇಳಿದರೆ ನಾನು ಈಗಾಗಲೇ ಹಿಂತಿರುಗಿಸಿದ್ದೇನೆ ಅಂತಾರೆ. ಅವರು ವಿಪಕ್ಷದ ನಾಯಕ. ಇವರು ಕೇಂದ್ರ ಸಚಿವರು. ಇವರಲ್ಲಿ ಯಾವ ರೀತಿಯ ಬದ್ಧತೆಯಿದೆ, ಜವಾಬ್ದಾರಿಯಿದೆ?. ಇವರ ಮಾತುಗಳಿಗೆ ಅರ್ಥ ಇದೆಯೇ? ಹುಚ್ಚರು ಮಾತನಾಡಿದ ಹಾಗೆ ಮಾತನಾಡುತ್ತಿದ್ದಾರೆ. ನಿವೇಶನಗಳನ್ನು ವಾಪಸ್ ಮಾಡಿದ ಮೇಲೆ ಅವರಿಗೆ ಮಾತನಾಡಲು ವಿಷಯವಿಲ್ಲ" ಎಂದರು.
"50 ಕೋಟಿ ರೂ ಲಂಚ ಆರೋಪದಲ್ಲಿ ಕುಮಾರಸ್ವಾಮಿ ಮೇಲೆ ಎಫ್ಐಆರ್ ಆಗಿದೆ. ದಾಖಲೆಸಮೇತ ಕೇಸ್ ಆಗಿದೆ. ಅದಕ್ಕೇನು ಉತ್ತರ ಕೊಡುತ್ತಾರೆ?. ಆರ್.ಅಶೋಕ್ ಮೇಲೆ ಎಫ್ಐಆರ್ ಆಗಿದೆ. ಅವರು ಏನು ಉತ್ತರ ಕೊಡುತ್ತಾರೆ?. ಅವರದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್, ಅವರ ಪಕ್ಷದಲ್ಲಿ ಭ್ರಷ್ಟಾಚಾರ ಮಾಡಿ ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ. ಈ ಸರ್ಕಾರವನ್ನು ತೆಗೆದುಹಾಕಿ ಸಿಎಂ ಆಗಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಇದಕ್ಕೆಲ್ಲ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಉತ್ತರ ಕೊಡಬೇಕಲ್ಲ?. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೋದಿ ಸಹ ಏನೂ ಮಾತನಾಡುತ್ತಿಲ್ಲ. ಕೇಶವ ಕೃಪಾಕ್ಕೆ ಕರೆದು ಆರ್ಎಸ್ಎಸ್ನವರಿಗೆ ಸರಿ ಮಾಡಲು ಕಳುಹಿಸಿದ್ದಾರೆ. ಇದು ಬಹಿರಂಗವಾದ ವಿಷಯ" ಎಂದು ಹೇಳಿದರು.
ಇದನ್ನೂ ಓದಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲು - FIR Against H D Kumaraswamy