ನವದೆಹಲಿ: ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆ ದೇಶದ ಪರಿಸ್ಥಿತಿಯು ಭಾರತದಂತಹ ನೆರೆಯ ರಾಷ್ಟ್ರಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಮತ್ತು ಅದಕ್ಕಾಗಿಯೇ ಈ ವಿಚಾರದ ಮೇಲೆ ಗಮನಹರಿಸುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾಂಘೈ ಸಹಕಾರ ಸಂಘಟನೆ (SCO-Shanghai Cooperation Organization ) ಮತ್ತು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (CSTO- Collective Security Treaty Organization) ನಡುವಿನ ಸಭೆಯ ನಿಮಿತ್ತ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮುಂಬರುವ ಸರ್ಕಾರದಲ್ಲಿ ಎಲ್ಲ ಸಮಾಜಗಳ ವರ್ಗಗಳ ಪ್ರಾತಿನಿಧ್ಯ ಮುಖ್ಯ ಎಂದು ಮೋದಿ ಪ್ರತಿಪಾದಿಸಿದ್ದಾರೆ. ಇಂತಹ ಹೊಸ ವ್ಯವಸ್ಥೆ ಗುರುತಿಸುವ ಕೆಲಸವನ್ನು ಅಂತಾರಾಷ್ಟ್ರೀಯ ಸರ್ಕಾರ ಮಾಡಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಅಫ್ಘಾನಿಸ್ತಾನದ ವಿಚಾರವಾಗಿ ವಿಶ್ವಸಂಸ್ಥೆಯ ಪಾತ್ರ ಬೆಂಬಲಿಸಿದ ಮೋದಿ, ಆ ದೇಶದಲ್ಲಿ ಅಸ್ಥಿರತೆ ಮತ್ತು ಮೂಲಭೂತವಾದ ಮುಂದುವರೆದರೆ ಅದು, ವಿಶ್ವದಾದ್ಯಂತ ಭಯೋತ್ಪಾದಕ ಸಿದ್ಧಾಂತಗಳನ್ನು ಮತ್ತು ಸಂಘಟನೆಗಳ ಹುಟ್ಟಿಗೆ ಕಾರಣವಾಗುತ್ತದೆ. ಬೇರೆ ದೇಶಗಳೂ ಭಯೋತ್ಪಾದನೆ ಮೂಲಕ ಅಧಿಕಾರಕ್ಕೆ ಬರಲು ಪ್ರೇರಣೆ ನೀಡುತ್ತವೆ ಎಂದಿದ್ದಾರೆ.
ಎಲ್ಲ ದೇಶಗಳು ಭಯೋತ್ಪಾದನೆಗೆ ಬಲಿಯಾಗಿವೆ, ಮತ್ತು ಆದ್ದರಿಂದ, ನಾವು ಒಟ್ಟಾಗಿ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಶಾಂಘೈ ಒಕ್ಕೂಟದ ರಾಷ್ಟ್ರಗಳು ಈ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಬೇಕು ಎಂದಿದ್ದಾರೆ.
ಶಾಂಘೈ ಒಕ್ಕೂಟದಲ್ಲಿ ನಾವು ರೂಪಿಸುವ ನಿಯಮಗಳು ಜಾಗತಿಕವಾಗಿ ಭಯೋತ್ಪಾದಕ ನಿಗ್ರಹಕ್ಕೆ ಮಾದರಿಯಾಗಲೂಬಹುದು. ನಾವು ರೂಪಿಸುವ ನಿಯಮಗಳು ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿರಬೇಕೆಂದು ಮೋದಿ ಹೇಳಿದ್ದಾರೆ.
ಇದರ ಜೊತೆಯಲ್ಲಿಯೇ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಅನಿಯಂತ್ರಿತ ಡ್ರಗ್ಸ್, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮಾನವ ಕಳ್ಳಸಾಗಣೆ ಮುಂತಾದ ವಿಚಾರಗಳ ಬಗ್ಗೆಯೂ ಮೋದಿ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಬಂಧಿತನಾಗಿದ್ದ ಉಗ್ರನ ಚಿಕ್ಕಪ್ಪ ಪ್ರಯಾಗರಾಜ್ನಲ್ಲಿ ಶರಣಾಗತಿ