ದಿಯೋಘರ್(ಜಾರ್ಖಂಡ್): ತ್ರಿಕೂಟ ಪರ್ವತ ರೋಪ್‌ವೇ ಅಪಘಾತದ ನಂತರ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಲು ಇಂದು ಮತ್ತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದೆ. ಬೆಳಗ್ಗೆ 8 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಹೆಲಿಕಾಪ್ಟರ್ ಮೂಲಕ ಜನರನ್ನು ರಕ್ಷಿಸಿ ಕರೆತರುವ ಕಾರ್ಯಾಚರಣೆಯನ್ನು ಸೇನೆ ಮಾಡುತ್ತಿದೆ.
ಮುಂದುವರಿದ ಕಾರ್ಯಾಚರಣೆ: ಸೋಮವಾರ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ರಾತ್ರಿಯಾದ್ದರಿಂದ ಸ್ಥಗಿತಗೊಳಿಸಲಾಗಿತ್ತು. ರೋಪ್ ವೇಯ ಟ್ರಾಲಿಯಲ್ಲಿ ಇನ್ನು 14 ಮಂದಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಏಪ್ರಿಲ್ 11 ರ ಬೆಳಗ್ಗೆ 7:30 ಕ್ಕೆ ವಾಯುಪಡೆಯ ಗರುಡ್ ಕಮಾಂಡೋಗಳ ತಂಡವು MI-17 ಮತ್ತು MI-17 V5 ಚಾಪರ್‌ಗಳ ಸಹಾಯದಿಂದ 32 ಜನರನ್ನು ರಕ್ಷಿಸಿದೆ. ಆದರೆ ಸಂಜೆ ವೇಳೆ ದುರಂತ ಘಟನೆಯೊಂದು ನಡೆದಿದೆ. ಚಾಪರ್‌ನಲ್ಲಿ ಪ್ರವಾಸಿಗರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವಾಗ, ಅವರ ಸುರಕ್ಷತಾ ಬೆಲ್ಟ್ ತೆರೆದು ಕೆಳಗಿನ ಕಂದಕಕ್ಕೆ ಬಿದ್ದಿರುವ ಘಟನೆ ಎಲ್ಲರ ಎದೆ ಝುಮ್ಮೆನ್ನಿಸುವಂತೆ ಮಾಡಿತು.
ಅವರಿಗೆ ನೀರು-ಆಹಾರ ಹೇಗೆ?: ನಾಲ್ಕು ಟ್ರಾಲಿಗಳಲ್ಲಿ ಒಟ್ಟು 14 ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಅವರಿಗೆ ನೀರು ಅಥವಾ ಯಾವುದೇ ರೀತಿಯ ಉಪಹಾರ ವ್ಯವಸ್ಥೆ ಮಾಡಲು ಸಾಧ್ಯವಾಗಿದೆಯೋ ಅಥವಾ ಇಲ್ಲವೋ ಎಂಬುದು ಪ್ರಶ್ನೆಯಾಗಿತ್ತು. ಆದ್ರೆ ರಕ್ಷಣಾ ಕಾರ್ಯದಲ್ಲಿಯೇ ವಾಯುಪಡೆ ತಂಡವು ಟ್ರಾಲಿಗಳಲ್ಲಿ ಸಿಲುಕಿರುವ ಪ್ರವಾಸಿಗರಿಗೆ ನೀರು ಮತ್ತು ತಿಂಡಿಗಳನ್ನು ಒದಗಿಸುತ್ತಿದೆ ಎಂದು ದಿಯೋಘರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಜುನಾಥ ಭಜಂತ್ರಿ ತಿಳಿಸಿದ್ದಾರೆ.
ಮೇಲಿಂದ ಬಿದ್ದು ವ್ಯಕ್ತಿ ಸಾವು: ಏಪ್ರಿಲ್ 11ರ ಸಂಜೆಯೊಳಗೆ ಎಲ್ಲ ಪ್ರವಾಸಿಗರನ್ನು ಸ್ಥಳಾಂತರಿಸುವ ಗುರಿ ಹೊಂದಿದ್ದರೂ ಸಾಧ್ಯವಾಗಿಲ್ಲ. ಪರ್ವತದ ಭೂವಿನ್ಯಾಸ ಕಷ್ಟವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಕಷ್ಟು ತೊಂದರೆಯಾಗುತ್ತಿದೆ. ಏಪ್ರಿಲ್ 12ರ ಬೆಳಗ್ಗೆ ಕಾರ್ಯಾಚರಣೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಉಳಿದ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ಓದಿ: ಜಾರ್ಖಂಡ್ ರೋಪ್‌ವೇ ದುರಂತ: ರಕ್ಷಣೆ ವೇಳೆ ಹೆಲಿಕಾಪ್ಟರ್ನಿಂದ ಕೆಳಗೆ ಬಿದ್ದ ವ್ಯಕ್ತಿ ಸಾವು
ದಿನವಿಡೀ ಕಾರ್ಯಾಚರಣೆ: ದಿನವಿಡೀ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಟ್ರಾಲಿಗಳಿಂದ 32 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಸಂಜೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ನಾಲ್ಕು ಟ್ರಾಲಿಗಳಲ್ಲಿ ಸುಮಾರು 14 ಮಂದಿ ಸಿಕ್ಕಿಬಿದ್ದಿದ್ದಾರೆ. ಏಪ್ರಿಲ್ 10 ರಂದು ಅಪಘಾತ ಸಂಭವಿಸಿದ್ದರಿಂದ ಇಡೀ ಜಿಲ್ಲಾಡಳಿತವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ಅಪಘಾತದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟ್ರಾಲಿಯಲ್ಲಿ ಸಿಕ್ಕಿಬಿದ್ದ ಕಮಾಂಡೋ: ವಾಯುಪಡೆಯ ಗರುಡ ಕಮಾಂಡೋವೊಬ್ಬರು ಟ್ರಾಲಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ರಕ್ಷಣೆ ಮಾಡಲು ಟ್ರಾಲಿಯಲ್ಲಿ ಇಳಿದರು. ಈ ಸಮಯದಲ್ಲಿ ಕತ್ತಲೆಯಿಂದಾಗಿ ಎರಡೂ ಕಾಪ್ಟರ್ಗಳು ಮುನ್ನಡೆದವು. ಇದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಏಕಂದ್ರೆ ಟ್ರಾಲಿಯಲ್ಲಿ ಸಿಕ್ಕಿಬಿದ್ದಿರುವ ಗರುಡ ಕಮಾಂಡೋ ರಾತ್ರಿಯಿಡೀ ಇತರ ಟ್ರಾಲಿಗಳಲ್ಲಿ ಸಿಕ್ಕಿಬಿದ್ದ ಪ್ರವಾಸಿಗರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಗನಿಗಾಗಿ ಕಾಯುತ್ತಿರುವ ತಾಯಿ: ದಿಯೋಘರ್‌ನ ಐಷಾರಾಮಿ ಪ್ರದೇಶದ ನಿವಾಸಿ ಜ್ಯೋತಿರ್ಮಯ್ ಭಾನುವಾರ ರಾತ್ರಿಯಿಂದ ತನ್ನ ಮಗ ನಮನ್ ನೀರಜ್‌ಗಾಗಿ ಕಾಯುತ್ತಿದ್ದಾರೆ. ಅವರ ಮಗ ಭಾನುವಾರ ಸ್ನೇಹಿತನೊಂದಿಗೆ ತ್ರಿಕೂಟ ರೋಪ್‌ವೇಗೆ ಭೇಟಿ ನೀಡಿದ್ದರು. ಈ ವೇಳೆ ಅಪಘಾತ ಸಂಭವಿಸಿ ಅವರು ಅಲ್ಲೇ ಸಿಲುಕಿಕೊಳ್ಳುವಂತ ಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಮನಗ ಬರುವಿಕೆಗಾಗಿ ಆ ತಾಯಿ ಕಾಯುತ್ತಿದ್ದಾರೆ.
ಮೊಕ್ಕಾಂ ಹೂಡಿದ ಅಧಿಕಾರಿಗಳು: ದಿಯೋಘರ್‌ನಲ್ಲಿ ತ್ರಿಕೂಟ ರೋಪ್‌ವೇ ಅಪಘಾತದ ನಂತರ ಆಡಳಿತ ಇಲಾಖೆಯು ದಿಯೋಘರ್ ಶಿಬಿರವನ್ನು ಮಾಡುತ್ತಿದೆ. ಎಡಿಜಿ ಆರ್‌ಕೆ ಮಲ್ಲಿಕ್ ಮತ್ತು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಅಮಿತಾಬ್ ಕೌಶಲ್ ಕೂಡ ರಕ್ಷಿಸಲ್ಪಟ್ಟ ಜನರ ಆರೈಕೆ ಮಾಡಿದರು. ಇದಲ್ಲದೇ ಡಿಐಜಿ ಸಂತಾಲ್ ಪರಗಣ ವ್ಯಾಪ್ತಿಯ ಪ್ರದೇಶದಲ್ಲೇ ಮೊಕ್ಕಾಂ ಹೂಡಿದ್ದಾರೆ.
ನಡೆದಿದ್ದೇನು?: ಏಪ್ರಿಲ್ 10 ರಂದು ರಾಮನವಮಿ ದಿನದಂದು ರೋಪ್ ವೇ ಸಹಾಯದಿಂದ ತ್ರಿಕೂಟ ಪರ್ವತವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಸಂಜೆ, ತ್ರಿಕೂಟ್ ಪರ್ವತದ ಮೇಲಿನ ವೇದಿಕೆಯಲ್ಲಿ ರೋಪ್‌ವೇಯ ಆಕ್ಸಲ್ ಮುರಿದುಹೋಗಿದೆ. ಇದರಿಂದಾಗಿ ರೋಪ್ ವೇ ಸಡಿಲಗೊಂಡು ಎಲ್ಲಾ 24 ಟ್ರಾಲಿಗಳ ಸಂಚಾರ ಸ್ಥಗಿತಗೊಂಡಿತು. ಇದೇ ವೇಳೆ ರೋಪ್ ವೇ ಸಡಿಲಗೊಂಡಿದ್ದರಿಂದ ಎರಡು ಟ್ರಾಲಿಗಳು ಒಂದಕ್ಕೊಂದು ಡಿಕ್ಕಿಯಾಗಿವೆ. ಇದರಿಂದಾಗಿ ಮಹಿಳಾ ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದಾರೆ.
ಓದಿ: ಡಿಕ್ಕಿ ಹೊಡೆದ ರೋಪ್ ವೇ ಕಾರುಗಳು, ಕೆಳಗೆ ಹಾರಿಬಿದ್ದ ದಂಪತಿ.. ಮಹಿಳೆ ಸಾವು, ಗಾಳಿಯಲ್ಲೇ ಸಿಲುಕಿದ್ರು 50 ಜನ!
ರೋಪ್‌ವೇ ನಿರ್ಮಾಣ: ತ್ರಿಕೂಟ ಪರ್ವತದಲ್ಲಿ ರೋಪ್‌ವೇ ವ್ಯವಸ್ಥೆಯನ್ನು 2009 ರಲ್ಲಿ ಸ್ಥಾಪಿಸಲಾಯಿತು. ಇದು ಜಾರ್ಖಂಡ್‌ನ ಏಕೈಕ ಮತ್ತು ಅತ್ಯಂತ ವಿಶಿಷ್ಟವಾದ ರೋಪ್‌ವೇ ವ್ಯವಸ್ಥೆಯಾಗಿದೆ. ಭೂಮಿಯಿಂದ ಬೆಟ್ಟಕ್ಕೆ ಹೋಗಲು 760 ಮೀಟರ್‌ಗಳ ಪ್ರಯಾಣವನ್ನು ರೋಪ್‌ವೇ ಮೂಲಕ ಕೇವಲ 5 ರಿಂದ 10 ನಿಮಿಷಗಳಲ್ಲಿ ತೆರಳಬಹುದಾಗಿದೆ.
ಕಂಪನಿಯಿಂದ ತನಿಖೆ: ಒಟ್ಟು 24 ಟ್ರಾಲಿಗಳಿವೆ. ಟ್ರಾಲಿಯಲ್ಲಿ 4 ಜನರು ಕುಳಿತುಕೊಳ್ಳಬಹುದು. ಆಸನಕ್ಕೆ 150 ಮತ್ತು ಕ್ಯಾಬಿನ್ ಬುಕ್ ಮಾಡಲು 500 ರೂ. ಇದೆ. ಇದನ್ನು ಕೋಲ್ಕತ್ತಾದ ದಾಮೋದರ್ ರೋಪ್‌ವೇಸ್ ಮತ್ತು ಇನ್ಫ್ರಾ ಲಿಮಿಟೆಡ್ ಕಂಪನಿಯು ನಿರ್ವಹಿಸುತ್ತದೆ. ಅದೇ ಕಂಪನಿಯು ಪ್ರಸ್ತುತ ವೈಷ್ಣೋದೇವಿ, ಹಿರಾಕುಡ್ ಮತ್ತು ಚಿತ್ರಕೂಟದಲ್ಲಿ ರೋಪ್‌ವೇಗಳನ್ನು ನಿರ್ವಹಿಸುತ್ತಿದೆ. ಈ ಘಟನೆಯ ಬಗ್ಗೆ ಸಂಪೂರ್ಣ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದು ಕಂಪನಿಯ ಜನರಲ್ ಮ್ಯಾನೇಜರ್ ಮಹೇಶ್ ಮೊಹ್ತಾ ಹೇಳಿದ್ದಾರೆ.
ಏನಿದು ತ್ರಿಕೂಟ ಪರ್ವತ: ಜಾರ್ಖಂಡ್‌ನ ದಿಯೋಘರ್ ಜಿಲ್ಲೆ ಎರಡು ಕಾರಣಗಳಿಗಾಗಿ ಹೆಸರುವಾಸಿಯಾಗಿದೆ. ಒಂದು ರಾವಣೇಶ್ವರ ಜ್ಯೋತಿರ್ಲಿಂಗ ಮತ್ತು ಇನ್ನೊಂದು ತ್ರಿಕೂಟ ಪರ್ವತದ ಮೇಲೆ ನಿರ್ಮಿಸಲಾದ ರೋಪ್‌ವೇ ವ್ಯವಸ್ಥೆ. ಈ ಪರ್ವತಕ್ಕೆ ಸಂಬಂಧಿಸಿದ ಅನೇಕ ಧಾರ್ಮಿಕ ನಂಬಿಕೆಗಳಿವೆ. ರಾಮಾಯಣ ಕಾಲದಲ್ಲಿ ರಾವಣನೂ ಈ ಸ್ಥಳದಲ್ಲಿ ತಂಗುತ್ತಿದ್ದನೆಂದು ಹೇಳಲಾಗುತ್ತದೆ. ಈ ಪರ್ವತದ ಮೇಲೆ ಕುಳಿತು ರಾವಣನು ರಾವಣೇಶ್ವರ ಜ್ಯೋತಿರ್ಲಿಂಗಕ್ಕೆ ಆರತಿ ಬೆಳಗುತ್ತಿದ್ದನು. ಈ ಪರ್ವತದಲ್ಲಿ ಭಗವಾನ್ ಶಂಕರನ ದೇವಾಲಯವೂ ಇದೆ. ಅಲ್ಲಿ ನಿತ್ಯ ಪೂಜೆಯೂ ನಡೆಯುತ್ತದೆ. ಈ ರೋಪ್‌ವೇ ವ್ಯವಸ್ಥೆಯಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಾರೆ.