ಬೆಂಗಳೂರು: ‘ದಿ ಕಾಶ್ಮೀರ ಫೈಲ್ಸ್’ ಮತ್ತು ಕಾಶ್ಮೀರಿ ಪಂಡಿತರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕ್ಷಮೆಯಾಚಿಸಬೇಕೆಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಕ್ಷಮೆ ಕೇಳುವವರೆಗೆ ಪ್ರತಿಭಟನೆಗಳು ಮುಂದುವರೆಯುತ್ತವೆ ಎಂದು ತೇಜಸ್ವಿ ಸೂರ್ಯ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಯ ಮುಂದೆ ಪ್ರತಿಭಟನೆ ನಡೆಸಿದ ನಂತರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತೇಜಸ್ವಿ ಸೂರ್ಯ ‘ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲೇವಡಿ ಮಾಡಿದ ರೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದೇವೆ. ನಾವು ಕೇಜ್ರಿವಾಲ್ ಅವರಿಂದ ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇವೆ. ಅವರು ಕ್ಷಮೆ ಕೇಳುವವರೆಗೂ ಪ್ರತಿಭಟನೆಗಳು ಮುಂದುವರೆಯಲಿವೆ ಎಂದಿದ್ದಾರೆ.
ರಾಮಮಂದಿರ ಅಪಹಾಸ್ಯ ಮಾಡಲಾಗ್ತಿದೆ: ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ಭಾರತ ಮತ್ತು ಹಿಂದೂ ವಿರೋಧಿ ನೀತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಮ ಮಂದಿರವನ್ನು ಅಪಹಾಸ್ಯ ಮಾಡಲಾಗುತ್ತಿದೆ. ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡಲಾಗುತ್ತಿದೆ. ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಇಂತಹ ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ನೀತಿಗಳು ಯಾವಾಗಲೂ ಆಮ್ ಆದ್ಮಿ ಪಕ್ಷದ ಕಾರ್ಯತಂತ್ರದ ಭಾಗವಾಗಿದೆ. ಕೇಜ್ರಿವಾಲ್ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಯಾವಾಗಲೂ ಸುಳ್ಳನ್ನು ಆಶ್ರಯಿಸುತ್ತಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸಿಸೋಡಿಯಾ ಹೇಳಿಕೆಗೆ ಸೂರ್ಯ ತಿರುಗೇಟು: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಮ್ಮನ್ನು 'ಬಿಜೆಪಿ ಗೂಂಡಾಗಳು' ಎಂದು ಕರೆಯುತ್ತಿದ್ದಾರೆ. ನಮ್ಮ ಪ್ರತಿಭಟನೆಯು ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯ ವಿರುದ್ಧವಾಗಿತ್ತು. ನಮ್ಮ ಕೋಪವು ದೇಶದ ಕೋಪವನ್ನು ಪ್ರತಿನಿಧಿಸುತ್ತದೆ. ನಾವು ಶಾಂತಿಯುತವಾಗಿ ಕೋಪವನ್ನು ವ್ಯಕ್ತಪಡಿಸಲು ಬಯಸಿದ್ದೇವು. ಪೊಲೀಸರು ನಮ್ಮನ್ನು ತಡೆಯಲು ಪ್ರಯತ್ನಿಸಿದರು. ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಮೇಲೆ ಜಲ ಫಿರಂಗಿಗಳನ್ನು ಬಳಸಲಾಗಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಮನೀಶ್ ಸಿಸೋಡಿಯಾ ಹೇಳಿಕೆಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, ನೀವು ಯಾರನ್ನು ಗೂಂಡಾಗಳು ಎಂದು ಕರೆಯುತ್ತೀರೋ ಅವರೇ ನಮ್ಮನ್ನು ಸಂಸತ್ತಿಗೆ ಕಳಿಸಿದ್ದಾರೆ. ನಾವು ನಿಮ್ಮಂತೆ ವಿಧಾನಸಭೆಗೆ ಹೋಗಿ ಯಾವುದೇ ಸಮಾಜದಲ್ಲಿ ರಕ್ತ ಹರಿಸಿ ನಗಲಿಲ್ಲ. ನೀವು ಹೇಳಿರುವುದು ಪ್ರಜಾಪ್ರಭುತ್ವ ವಿರೋಧಿ. ನೀವು ಆ ಹೇಳಿಕೆಯನ್ನು ಹಿಂಪಡೆಯಬೇಕು ಒತ್ತಾಯಿಸಿದ್ದಾರೆ.
ಕೇಜ್ರಿವಾಲ್ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರಕರಣ - 8 ಮಂದಿ ಬಂಧನ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಹಾನಿಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿವಿಲ್ ಲೈನ್ಸ್ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ಸಹಾಯದಿಂದ ಇತರ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಬುಧವಾರ ಸಂಜೆ ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ತಪಾಸಣೆ ವೇಳೆ ಕಾರಲ್ಲಿ ಸ್ಫೋಟಕ ತುಂಬಿದ್ದ ಮೂವರು ಆರೋಪಿಗಳ ಸೆರೆ; ಉಗ್ರರ ನಂಟಿನ ಶಂಕೆ..!