ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 370 ನೇ ವಿಧಿ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಮೂರು ದಿನಗಳ ಕಾಲ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ.
ಮೃತ ಅಧಿಕಾರಿ ಮನೆಗೆ ಅಮಿತ್ ಶಾ ಭೇಟಿ
ಈ ವೇಳೆ ಅವರು, ಉಗ್ರರಿಂದ ಹತ್ಯೆಗೊಳಗಾದ ಪೊಲೀಸ್ ಅಧಿಕಾರಿ ಪರ್ವೇಜ್ ಅಹ್ಮದ್ ದಾರ್ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಪರ್ವೇಜ್ ಅಹ್ಮದ್ ದಾರ್, ಜೂನ್ 22 ರ ಸಂಜೆ ಪ್ರಾರ್ಥನೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ನೌಗಾಮ್‌ನಲ್ಲಿರುವ ಅವರ ಮನೆಯ ಬಳಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ, ತೀವ್ರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದರು.
ಅಧಿಕಾರಿ ಪತ್ನಿಗೆ ಸರ್ಕಾರಿ ಉದ್ಯೋಗ
ಇದೇ ವೇಳೆ, ಹುತಾತ್ಮ ಪೊಲೀಸ್ ಅಧಿಕಾರಿಯ ಪತ್ನಿ ಫಾತಿಮಾ ಅಖ್ತರ್ ಅವರಿಗೆ ಸಹಾನುಭೂತಿಯ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೇಮಕಾತಿಯ ದಾಖಲೆಗಳನ್ನು ಅಮಿತ್ ಶಾ ಅವರು ನೀಡಿದರು.
ಆರ್ಟಿಕಲ್ 370 ರದ್ಧತಿ ಬಳಿಕ ಮೊದಲ ಭೇಟಿ
ಆರ್ಟಿಕಲ್ 370 ರ ಅಡಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5, 2019 ರಂದು ಹಿಂತೆಗೆದುಕೊಂಡ ನಂತರ ಮತ್ತು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಅಮಿತ್ ಶಾ ಅವರ ಮೊದಲ ಭೇಟಿ ಇದಾಗಿದೆ.
ಶಾ ಅವರ ಭೇಟಿಗೆ ಮುನ್ನ ಕಾಶ್ಮೀರದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ವಿಶೇಷವಾಗಿ ನಗರದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಅರೆಸೇನಾ ಪಡೆಗಳ ಐವತ್ತು ಕಂಪನಿಗಳು, ಸುಮಾರು 5,000 ಸೈನಿಕರನ್ನು ಕಣಿವೆಗೆ ಸೇರಿಸಲಾಗುತ್ತಿದೆ. ಸಿಆರ್‌ಪಿಎಫ್ ಪಡೆಗಳ ಬಂಕರ್‌ಗಳು ನಗರದ ಹಲವು ಪ್ರದೇಶಗಳಲ್ಲಿ ಹಾಗೂ ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪರಿಶೀಲನಾ ಸಭೆ
ಗಡಿಯಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಅಮಿತ್ ಶಾ, ಭದ್ರತಾ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಮ್ಮು- ಕಾಶ್ಮೀರ ಪೊಲೀಸ್, ಭಾರತೀಯ ಸೇನೆ, ಗುಪ್ತಚರ ಬ್ಯೂರೋ, ಅರೆ ಸೇನಾ ಪಡೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಮೀಟಿಂಗ್ನಲ್ಲಿ ನಾಗರಿಕ ಹತ್ಯೆಗಳು, ಉಗ್ರಗಾಮಿತ್ವ, ಪಾಕ್ನಿಂದ ಬೆದರಿಕೆ ಕುರಿತಂತೆ ಚರ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಶ್ಮೀರದ ಯುವ ಕ್ಲಬ್‌ಗಳ ಸದಸ್ಯರ ಜತೆ ಮೀಟಿಂಗ್
ರಾಜಧಾನಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಯುವ ಕ್ಲಬ್‌ಗಳ ಸದಸ್ಯರೊಂದಿಗೆ ಶಾ ಸಂವಾದ ನಡೆಸಿದ್ದು, "ನಾಗರಿಕರು, ಉಗ್ರಗಾಮಿಗಳು, ಭದ್ರತಾ ಪಡೆಗಳು ಮತ್ತು ಇತರರನ್ನು ಒಳಗೊಂಡಂತೆ 40 ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ಮೃತಪಟ್ಟಿದ್ದಾರೆ. ನಾವು ಅದನ್ನು ಕೊನೆಗೊಳಿಸಬೇಕು. ಭಯೋತ್ಪಾದನೆ ಮತ್ತು ಅಭಿವೃದ್ಧಿ ಒಟ್ಟಿಗೆ ಹೋಗಬಹುದೇ? ಅಭಿವೃದ್ಧಿಯನ್ನು ಸಾಧಿಸಲು ನಾವು ಮೊದಲು ಶಾಂತಿಯನ್ನು ಸಾಧಿಸಬೇಕು ”ಎಂದು ಸಂವಾದದ ಸಮಯದಲ್ಲಿ ಹೇಳಿದರು.
‘ಕ್ಷೇತ್ರಗಳ ವಿಂಗಡಣೆ ಬಳಿಕ ಚುನಾವಣೆ’
ಜಮ್ಮುಕಾಶ್ಮೀರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಾದ ಬಳಿಕ ಚುನಾವಣೆ ನಡೆಯಲಿದೆ. ಬಳಿಕ ರಾಜ್ಯತ್ವವನ್ನು ಪುನಃ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
‘ಯುವಕರು ಉದ್ಯೋಗದ ಬಗ್ಗೆ ಮಾತನಾಡ್ತಿದ್ದಾರೆ’
ಈ ಹಿಂದೆ ಯುವಕರು ಕಲ್ಲು ತೂರಾಟ, ಭಯೋತ್ಪಾದನೆಯತ್ತ ಒಲವು ತೋರುತ್ತಿದ್ದರು. 370 ನೇ ವಿಧಿಯ ಬಳಿಕ ಅವರು ಉದ್ಯೋಗ, ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಅಮಿತ್ ಶಾ ಅವರು ಭಾನುವಾರ ಜಮ್ಮುವಿನ ಭಗವತಿ ನಗರದಲ್ಲಿ ಪಕ್ಷದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮಿತ್ ಶಾ ಅವರ ಮೂರು ದಿನಗಳ ಪ್ರವಾಸದ ಸಮಯದಲ್ಲಿ, ಅಮಿತ್ ಶಾ ಬಿಜೆಪಿ ಕಾರ್ಯಕರ್ತರು, ಪ್ರಮುಖರ ಜತೆ ಸಂವಾದ ನಡೆಸುವ ನಿರೀಕ್ಷೆಯಿದೆ.
ಶಾ ವಿರುದ್ಧ ಮುಫ್ತಿ ಕೆಂಡಾಮಂಡಲ
ಕೇಂದ್ರ ಸರ್ಕಾರ ಘೋಷಿಸಿರುವ ಕೆಲ ಯೋಜನೆಗಳನ್ನು ಈ ಹಿಂದಿನ ಸರ್ಕಾರವೇ ಘೋಷಿಸಿತ್ತು. ಗೃಹ ಸಚಿವರು ಶ್ರೀನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸುವುದು, ವೈದ್ಯಕೀಯ ಕಾಲೇಜುಗಳ ಅಡಿಪಾಯ ಹಾಕುವುದು ಹೊಸತೇನಲ್ಲ ಎಂದು ಮೆಹಬೂಬಾ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: 'ಸಂಜೆ 5 ಗಂಟೆಯ ನಂತರ ಠಾಣೆಗೆ ಹೋಗಬೇಡಿ'.. ಯುಪಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ ‘ಬೇಬಿ’ ಹೇಳಿಕೆ
ಯುಪಿಎ ಸರ್ಕಾರದ ಅವಧಿಯಲ್ಲಿ ಆರು ವೈದ್ಯಕೀಯ ಕಾಲೇಜುಗಳು ಮಂಜೂರಾಗಿವೆ. ಆರ್ಟಿಕಲ್ 370 ರ ರದ್ಧತಿ ಬಳಿಕ ಜಮ್ಮುಕಾಶ್ಮೀರ ಗೊಂದಲದಲ್ಲಿ ಸಿಲುಕಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.