ನವದೆಹಲಿ: ಸುಮಾರು17 ವರ್ಷದ ಬಾಲಕನ ಮೃತದೇಹ ಟ್ರಾವೆಲ್ ಬ್ಯಾಗ್ನಲ್ಲಿ ಪತ್ತೆಯಾಗಿರುವ ಘಟನೆ ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಮೃತ ಬಾಲಕ ದೆಹಲಿಯ ರೋಹಿಣಿ ಸೆಕ್ಟರ್ 1ರ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ. ದೆಹಲಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸಮೀರ್ ಶರ್ಮಾ ಪ್ರಕಾರ, ಮಂಗೋಲ್‌ಪುರಿ ಪೊಲೀಸ್ ಠಾಣೆಗೆ ಬೆಳಗ್ಗೆ 7 ಗಂಟೆಗೆ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದರು.
ಮಾಹಿತಿ ಸಿಕ್ಕ ನಂತರ ಪೊಲೀಸರು ತಕ್ಷಣ ಮಂಗೋಲ್ಪುರಿ ಎದುರು ಪೀರ್ ಬಾಬಾ ಮಜಾರ್ ಮುಖ್ಯ ರಸ್ತೆಯ ಬಳಿ ತಲುಪಿದ್ದು, ಪರಿಶೀಲನೆ ನಡೆಸಿದಾಗ ನೇರಳೆ ಬಣ್ಣದ ಬ್ಯಾಗ್ನಲ್ಲಿ ಶವವನ್ನು ತುಂಬಿಟ್ಟಿರುವುದು ಗೊತ್ತಾಗಿದೆ. ಬಿಳಿ ಕುರ್ತಾ ಮತ್ತು ಪೈಜಾಮಾ ಧರಿಸಿದ ಬಾಲಕನನ್ನು ಗಂಟಲು ಸೀಳಿ ಕೊಲೆ ಮಾಡಿ, ಮೃತದೇಹವನ್ನು ಟ್ರಾವೆಲ್ ಬ್ಯಾಗ್ನಲ್ಲಿ ಇಟ್ಟಿರುವುದು ಗೊತ್ತಾಗಿದೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೊದಲಿಗೆ ಮೃತನ ಗುರುತು ಪತ್ತೆ ಕಷ್ಟವಾಗಿತ್ತು. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಯಿತು. ಹಲವಾರು ತಂಡಗಳನ್ನು ರಚಿಸಿ, ತನಿಖೆ ನಡೆಸಲಾಗಿತ್ತು. ನಂತರ ಮೃತನ ಗುರುತು ಪತ್ತೆಯಾಗಿದೆ. ಗುರುವಾರ 17 ವರ್ಷದ ಬಾಲಕ ನಾಪತ್ತೆಯಾಗಿದ್ದು, ದಕ್ಷಿಣ ರೋಹಿಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂತು. ಐಪಿಸಿಯ ಸೆಕ್ಷನ್ 363 ಅಡಿಯಲ್ಲಿ ರೋಹಿಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈಗ ಪೊಲೀಸರು ಕೊಲೆಯ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ : ನಾಲ್ಕು ವರ್ಷದ ಮಗು ಅನಾಥ !