ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಸಿಕೆ ಕೊರತೆಯ ಮಧ್ಯೆ ಕೋವಿಡ್-19 ವ್ಯಾಕ್ಸಿನೇಷನ್ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ದೆಹಲಿ ಸರ್ಕಾರ ಪ್ರಯತ್ನಿಸುತ್ತಿದೆ. ವ್ಯಾಕ್ಸಿನೇಷನ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾತನಾಡಿ, ರಾಷ್ಟ್ರ ರಾಜಧಾನಿ ಕೋವಿಡ್ ಲಸಿಕೆಗಳ ಕೊರತೆ ಎದುರಿಸುತ್ತಿದೆ. ಆದರೆ, ಸರ್ಕಾರವು ಈ ಕುರಿತು ಇತರ ಸಿದ್ಧತೆಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಲಸಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಮತ್ತು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳು ವ್ಯಾಕ್ಸಿನೇಷನ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ.
ಪ್ರಸ್ತುತ ಬಾಬರ್ ರಸ್ತೆಯಲ್ಲಿರುವ ಔಷಧಾಲಯ ಕೇಂದ್ರವು 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ವ್ಯಾಕ್ಸಿನ್ ನೀಡುತ್ತಿದ್ದು, ವಾಕ್-ಇನ್ ಸೌಲಭ್ಯವನ್ನು ಸಹ ಹೊಂದಿದೆ.
45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಲಸಿಕೆ ತೆಗೆದುಕೊಳ್ಳಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.
ಆದರೆ, 18 ವರ್ಷ ಮೇಲ್ಪಟ್ಟ ಜನರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕೋವಿನ್ ಆ್ಯಪ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು ಎಂದು ಲಸಿಕೆ ಅಧಿಕಾರಿ ರೋಹಿತ್ ರಾಣಾ ತಿಳಿಸಿದ್ದಾರೆ.
ಈವರೆಗೆ ದೆಹಲಿಯಲ್ಲಿ 31,01, 562 ಜನರಿಗೆ ವ್ಯಾಕ್ಸಿನ್ ನಿಡಲಾಗಿದೆ. ಅದರಲ್ಲಿ 24,82,778 ಜನರು ತಮ್ಮ ಮೊದಲ ಡೋಸ್ ಪಡೆದಿದ್ದಾರೆ ಮತ್ತು 6,18,784 ಜನರು ತಮ್ಮ ಎರಡನೇ ಡೋಸ್ ಪಡೆದಿದ್ದಾರೆ.